`ಉತ್ತಮ’ ಎನಿಸುವಂತಹ ಬಜೆಟ್ ಮಂಡಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಪ್ರತಿಯೊಬ್ಬರಿಗೂ ಒಂದಿಲ್ಲಾ ಒಂದು ಅನುಕೂಲ ಆಗುವಂತೆ ನೋಡಿಕೊಂಡಿದ್ದಾರೆ. ಈ ಬಜೆಟ್‍ನಲ್ಲಿ ಪ್ರಮುಖವಾಗಿ ಆದ್ಯತೆ ನೀಡಿರುವುದೆಂದರೆ ಕೈಗೆಟುಕುವ ದರದಲ್ಲಿ ವಸತಿ ಸೌಲಭ್ಯ ಹೊಂದುವ ಯೋಜನೆಗೆ ಮೂಲ ಸೌಕರ್ಯ ಮಾನ್ಯತೆ ನೀಡಿರುವುದು. ಇದು ವಸತಿ ಯೋಜನೆಗಳ ಆಧಾರಸ್ಥಂಭವೆಂದೇ ಹೇಳಲಾಗುವ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅತ್ಯಂತ ಸಹಕಾರಿಯಾಗಲಿದೆ.
ಈ ನಿಟ್ಟಿನಲ್ಲಿ ಅಂದರೆ, ಕೈಗೆಟುಕುವ ದರದ ಮನೆಗಳ ನಿರ್ಮಾಣ ಯೋಜನೆಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕಳೆದ ವರ್ಷಕ್ಕಿಂತ 8 ಸಾವಿರ ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನವನ್ನು ನೀಡಲಾಗಿದೆ. ಅಂದರೆ, 2016-17 ನೇ ಸಾಲಿನಲ್ಲಿ ಇದಕ್ಕಾಗಿ 15,000 ಕೋಟಿ ರೂಪಾಯಿ ನೀಡಿದ್ದರೆ, 2017-18 ನೇ ಸಾಲಿಗೆ 23,000 ಕೋಟಿ ರೂಪಾಯಿಗಳ ಅನುದಾನ ನಿಗದಿ ಮಾಡಲಾಗಿದೆ.
ಬಜೆಟ್‍ನಲ್ಲಿ ಕೈಗೆಟುಕುವ ದರದ ವಸತಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಕ್ರೆಡಾಯ್-ಕರ್ನಾಟಕದ ಅಧ್ಯಕ್ಷ ನಾಗರಾಜ ರೆಡ್ಡಿ ಅವರು, ``ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 2022 ರ ವೇಳೆಗೆ ಸರ್ವರಿಗೂ ಸೂರು ಎಂಬ ಕನಸನ್ನು ನನಸು ಮಾಡುವಲ್ಲಿ ಬೆಂಗಳೂರಿನ ರಿಯಲ್ ಎಸ್ಟೇಟ್ ಡೆವಲಪರ್‍ಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆನೇಕಲ್ ನಗರ, ಹೊಸಕೋಟೆ, ಬೂದಿಗೆರೆ ಕ್ರಾಸ್, ದೊಡ್ಡಬಳ್ಳಾಪುರ ರಸ್ತೆ, ಹೊಸಪಾಳ್ಯ, ಹೊಂಗಸಂದ್ರ, ಕಂಬಿಪುರ, ಅಮೃತಹಳ್ಳಿ, ಬೊಮ್ಮನಹಳ್ಳಿ, ಹೆಣ್ಣೂರು ಮತ್ತು ಇತರೆ ಕಡೆಗಳಲ್ಲಿ ನಾವು ಸಿಂಗಲ್ ಮತ್ತು ಡಬಲ್ ಬೆಡ್‍ರೂಂ ಮನೆಗಳ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ.
ಕಳೆದ ಡಿಸೆಂಬರ್ 2016 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 50,000 ರೂಪಾಯಿಗಿಂತ ಕಡಿಮೆ ಆದಾಯ ಇರುವ ಮೊದಲ ಬಾರಿಗೆ 65 ಚದರ ಮೀಟರ್ ವಿಸ್ತೀರ್ಣದ ಮನೆಯನ್ನು ಖರೀದಿಸುವವರಿಗೆ ಶೇ.6.5 ರಷ್ಟು ಸಬ್ಸಿಡಿಯನ್ನು ಘೋಷಿಸಿದ್ದು, ಈ ಅಂಶವನ್ನು ಬಜೆಟ್‍ನಲ್ಲಿ ಅಡಕ ಮಾಡಲಾಗಿದೆ. ಈ ಸಂಬಂಧ ಸದ್ಯದಲ್ಲೇ ಪ್ರಕಟಣೆ ಹೊರಬೀಳಲಿದೆ. ಇದರ ಜತೆಗೆ ವೇತನದ ಮೇಲೆ ತೆರಿಗೆ ಕಡಿಮೆ ಮಾಡಿರುವ ಅಂಶ ಸೇರಿದಂತೆ ಈ ಎರಡೂ ಕಾರಣಗಳು ರಿಯಲ್ ಎಸ್ಟೇಟ್ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಉತ್ತೇಜನ ದೊರಕಿಸಿಕೊಡಲಿವೆ’’ ಎಂದು ತಿಳಿಸಿದರು.
ಬಜೆಟ್ ಮತ್ತು ಬಜೆಟ್‍ನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಕಟಿಸಿರುವ ಹಣಕಾಸು ಸೌಲಭ್ಯಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ರೆಡಾಯ್ ಬೆಂಗಳೂರು ಘಟಕದ ಅಧ್ಯಕ್ಷ ಜೆ.ಸಿ.ಶರ್ಮ ಅವರು, ``ರಿಯಲ್ ಎಸ್ಟೇಟ್ ಉದ್ಯಮದ ಮಟ್ಟಿಗೆ ಇದೊಂದು ಸಮತೋಲಿತ ಬಜೆಟ್ ಆಗಿದೆ. ಮೂಲಸೌಕರ್ಯ, ಪ್ರಗತಿ, ವಸತಿ ಮತ್ತು ಖಾಸಗಿ ಸೇರಿದಂತೆ ವಿದೇಶಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಾಲಕ್ರಮೇಣ ಸರ್ಕಾರಿ ಸಾಲಗಳ ಪ್ರಮಾಣ ಅಥವಾ ಕಾರ್ಯಕ್ರಮಗಳನ್ನು ಕಡಿಮೆ ಮಾಡುವ ಘೋಷಣೆ ಮಾಡಲಾಗಿದೆ.
ಇದಲ್ಲದೇ, ಮುಂದಿನ ದಿನಗಳಲ್ಲಿ ಬಡ್ಡಿದರಗಳು ಮತ್ತಷ್ಟು ಕಡಿಮೆಯಾಗಲಿವೆ. ಸರ್ಕಾರ ಘೋಷಿಸಿರುವ ಈ ಕಾರ್ಯಕ್ರಮಗಳು ನಿರಾಯಾಸವಾಗಿ ಬಂಡವಾಳವನ್ನು ಆಕರ್ಷಿಸಲಿದ್ದು, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಾಕಷ್ಟು ಬಂಡವಾಳ ಮತ್ತು ಸಂಪನ್ಮೂಲ ಕ್ರೋಢೀಕರಣವಾದಂತಾಗುತ್ತದೆ. ಕೇವಲ ರಿಯಲ್ ಎಸ್ಟೇಟ್ ಉದ್ಯಮಕ್ಕಲ್ಲದೇ, ಅದಕ್ಕೆ ಸಂಬಂಧಿಸಿದ ವಲಯಗಳಿಗೂ ಇದರ ಲಾಭ ಸಿಗಲಿದೆ. ವಸತಿ ಯೋಜನೆಗಳಿಗೆ ಈ ಹಿಂದೆ 3 ವರ್ಷಗಳವರೆಗೆ ನೀಡಲಾಗುತ್ತಿದ್ದ ತೆರಿಗೆ ಉತ್ತೇಜನಗಳನ್ನು5 ವರ್ಷಕ್ಕೆ ವಿಸ್ತರಿಸಿರುವುದು ಮತ್ತು ಕಾರ್ಪೆಟ್ ಏರಿಯಾವನ್ನು ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ’’ ಎಂದು ಬಣ್ಣಿಸಿದ್ದಾರೆ.
ವೇತನದಾರರಿಗೆ ತೆರಿಗೆಯನ್ನು ಇಳಿಸಿರುವುದರ ಬಗ್ಗೆ ಮಾತನಾಡಿರುವ ಕ್ರೆಡಾಯ್-ಬೆಂಗಳೂರು ಘಟಕದ ಕಾರ್ಯದರ್ಶಿ ಸುರೇಶ್ ಹರಿ ಅವರು, ``ರಿಯಲ್ ಎಸ್ಟೇಟ್ ಉದ್ಯಮದಲ್ಲಿರುವ ನಾವು ಅತ್ಯಂತ ಹೆಚ್ಚು ಪ್ರಮಾಣ ಅಥವಾ ಆಮೂಲಾಗ್ರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಬಯಸುವುದಿಲ್ಲ. ಏಕೆಂದರೆ, ಸಣ್ಣ, ಸರಳ ಕ್ರಮಗಳೇ ರಿಯಲ್ ಎಸ್ಟೇಟ್ ವಲಯದಲ್ಲಿನ ಎಲ್ಲರೂ ಒಟ್ಟಾಗಿ ಗುರಿಗಳನ್ನು ತಲುಪಬಹುದಾಗಿದೆ.
ಈ ನಿಟ್ಟಿನಲ್ಲಿ ಈ ಬಜೆಟ್ ಕೆಲಸ ಮಾಡಿದೆ ಎಂಬ ನಂಬಿಕೆ ನನ್ನದಾಗಿದೆ. 3 ರಿಂದ 5 ಲಕ್ಷ ರೂಪಾಯಿ ವಾರ್ಷಿಕ ಆದಾಯ ಇರುವ ವೇತನದಾರರಿಗೆ ತೆರಿಗೆಯನ್ನು ಕಡಿಮೆ ಮಾಡಿರುವುದರಿಂದ ಸರ್ಕಾರ ಈ ವರ್ಗ ಹೆಚ್ಚಾಗಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಮಾಡುವಂತೆ ಮಾಡಿದೆ. ಇದಲ್ಲದೇ, 2017-18 ನೇ ಸಾಲಿನಲ್ಲಿ ವೈಯಕ್ತಿಕ ಸಾಲಕ್ಕಾಗಿ 20,000 ಕೋಟಿ ರೂಪಾಯಿಗಳನ್ನು ನ್ಯಾಷನಲ್ ಹೌಸಿಂಗ್ ಬ್ಯಾಂಕ್‍ಗೆ ನೀಡುತ್ತಿರುವುದು ಕೈಗೆಟುಕುವ ದರದ ವಸತಿ ಯೋಜನೆ ಮುನ್ನಡೆಗೆ ಪರಿಣಾಮಕಾರಿಯಾಗಲಿದೆ’’ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿದೇಶಿ ಬಂಡವಾಳ ಮಂಡಳಿಯನ್ನು ರದ್ದು ಮಾಡಿರುವುದು ಮತ್ತು ಹೊಸ ನೀಲನಕ್ಷೆಯೊಂದಿಗೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ ನೀತಿ ತರಲು ಹೊರಟಿರುವುದು ಅತ್ಯುತ್ತಮವಾದ ಕ್ರಮವಾಗಿದೆ. ಇದರ ಪರಿಣಾಮ ದೇಶಕ್ಕೆ ಮತ್ತು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೆಚ್ಚಿನ ಬಂಡವಾಳ ಹರಿದು ಬರಲಿದೆ. ಇದರ ಜತೆಗೆ ಜುಲೈ 2017 ರಿಂದ ಜಿಎಸ್‍ಟಿ ಅನುಷ್ಠಾನಕ್ಕೆ ತರುತ್ತಿರುವುದು ರಿಯಲ್ ಎಸ್ಟೇಟ್ ಉದ್ಯಮ ಸೂಕ್ತ ಮತ್ತು ಸರಿಯಾದ ಮಾರ್ಗದಲ್ಲಿ ಅಭಿವೃದ್ಧಿ ಹೊಂದಲು ಪೂರಕವಾಗುತ್ತದೆ ಎಂದು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮದ ಹಲವಾರು ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.