ಮುಂಬೈ: ಈ ಐಪಿಎಲ್ ಆವೃತ್ತಿಯಲ್ಲಿ ಟಾಸ್ ಎನ್ನುವುದು ವಿರಾಟ್ ಕೊಹ್ಲಿಗೇ ತಿರುಗುಬಾಣವಾಗುತ್ತಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಳ್ಳುತ್ತಿರುವ ಕೊಹ್ಲಿ ತಮ್ಮ ನಿರ್ಧಾರಕ್ಕೆ ತಾವೇ ಹಳಿದುಕೊಳ್ಳುವಂತೆ ಆಗುತ್ತಿದೆ.
ಎದುರಾಳಿಯನ್ನು ಕಡಿಮೆ ರನ್ ಗೆ ಕಟ್ಟಿ ಹಾಕಲು ಚೇಸಿಂಗ್ ವೀರ ಕೊಹ್ಲಿ ಕಳೆದೆರಡು ಪಂದ್ಯಗಳಲ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆದರೆ ಎರಡೂ ಪಂದ್ಯಗಳಲ್ಲೂ ಮೊತ್ತ 200 ರ ಗಡಿ ದಾಟಿದೆ.
ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನ ಸಂಜು ಸ್ಯಾಮ್ಸನ್ ಸಿಡಿದರೆ, ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಸಿಡಿಲ ಮರಿಯಾಗಿ ಎರಗಿದರು. ಕೇವಲ 52 ಬಾಲ್ ಗಳಲ್ಲಿ 5 ಸಿಕ್ಸರ್ ಗಳೊಂದಿಗೆ 92 ರನ್ ಗಳಿಸಿದ ಶರ್ಮಾ ಮೊನ್ನೆಯ ಸಂಜು ಸ್ಯಾಮ್ಸನ್ ಇನಿಂಗ್ಸ್ ನೆನಪಿಸಿದರು. ಇದರೊಂದಿಗೆ ಮುಂಬೈ ನಿಗದಿತ 20 ಓವರ್ ಗಳಲ್ಲಿ 213 ರನ್ ಪೇರಿಸಿತ್ತು.
ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆರ್ ಸಿಬಿ ಪರ ನಾಯಕ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದು ಯಶಸ್ವಿಯಾದರು 62 ಬಾಲ್ ಗಳಲ್ಲಿ 92 ರನ್ ಸಿಡಿಸಿದರು. ಆದರೆ ಉಳಿದವರಿಂದ ಅವರಿಗೆ ಉತ್ತಮ ಸಾಥ್ ಸಿಗದೇ ನಿಗದಿತ 20 ಓವರ್ ಗಳಲ್ಲಿ 167 ರನ್ ಗಳಿಸಿ 46 ರನ್ ಗಳಿಂದ ಸೋಲನುಭವಿಸಿತು.
ಅನುಭವಿ ಬೌಲಿಂಗ್ ಪಡೆಯಿದ್ದರೂ ಕೊಹ್ಲಿ ಪಡೆ ಎದುರಾಳಿಗಳನ್ನು ಕಟ್ಟಿ ಹಾಕಲು ಹೆಣಗಾಡುತ್ತಿರುವುದು ಅಭಿಮಾನಿಗಳ ನಿರಾಶೆಗೆ ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.