ದುಬೈ: ಹೆಸರಿಗೆ ಮಾತ್ರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಕೂಟ. ಆದರೆ ಪಂಜಾಬ್ ಬಿಟ್ಟರೆ ಉಳಿದೆಲ್ಲಾ ತಂಡಗಳಲ್ಲಿ ವಿದೇಶೀ ಕೋಚ್ ಗಳದ್ದೇ ಕಾರುಬಾರು. ಈ ವಿಚಾರವಾಗಿ ಪಂಜಾಬ್ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಬೇಸರ ಹೊರಹಾಕಿದ್ದಾರೆ.
‘ಇತರ ಫ್ರಾಂಚೈಸಿಗಳಲ್ಲಿ ಯಾಕೆ ಭಾರತೀಯ ಕೋಚ್ ಗಳಲ್ಲಿ ಟಾಪ್ ಸ್ಥಾನಗಳಲ್ಲಿಲ್ಲ ಎನ್ನುವ ಬಗ್ಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಅದರ ಅರ್ಥ ಭಾರತೀಯರು ಯಾರೂ ಮುಖ್ಯ ಕೋಚ್ ಆಗುವ ಸಾಮರ್ಥ್ಯವಿಲ್ಲದವರು ಎಂದಲ್ಲ. ಇದು ಒಂಥರಾ ಪರಿಸ್ಥಿತಿಯ ವ್ಯಂಗ್ಯ. ಹೇಳಿಕೊಳ‍್ಳಲು ಇಂಡಿಯನ್ ಪ್ರೀಮಿಯರ್ ಲೀಗ್. ಆದರೆ ವಿದೇಶೀ ಕೋಚ್ ಗಳ ಸಂಖ್ಯೆಯೇ ಹೆಚ್ಚಿದೆ. ಮುಂದಿನ ದಿನಗಳಲ್ಲಾದರೂ ಭಾರತೀಯ ಕೋಚ್ ಗಳ ಸಂಖ್ಯೆ ಹೆಚ್ಚಬಹುದು ಎಂಬುದು ನನ್ನ ವಿಶ್ವಾಸ’ ಎಂದು ಕುಂಬ್ಳೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.