ಆಸ್ಟ್ರೇಲಿಯಾದ ಆಲ್ರೌಂಡರ್ ಶೇನ್ ವ್ಯಾಟ್ಸನ್ ಅವರನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟ್ಯಾಂಡ್ ಬೈ ಕ್ಯಾಪ್ಟನ್ ಆಗಿ ಘೋಷಿಸಲಾಗಿದೆ. ಬಲ ಭುಜದ ಗಾಯದಿಂದ ಕೊಹ್ಲಿ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೊಹ್ಲಿ ಫಿಟ್ ಆಗುವವರೆಗೂ ವ್ಯಾಟ್ಸನ್ ತಂಡವನ್ನ ಮುನ್ನಡೆಸಲಿದ್ದಾರೆ.
ಏಪ್ರಿಲ್ 5ರಂದು ಸನ್ ರೈಸರ್ಸ್ ವಿರುದ್ಧ ಬೆಂಗಳೂರು ತಂಡ ಮೊದಲ ಪಂದ್ಯವನ್ನಾಡುತ್ತಿದೆ. ಆದರೆ, ಈ ಪಂದ್ಯದಲ್ಲಿ ತಂಡವನ್ನ ಮುನ್ನಡೆಸುತ್ತಿರುವ ವ್ಯಾಟ್ಸನ್ ಭಾರೀ ಒತ್ತಡದಲ್ಲಿದ್ದಾರೆ. ಕೊಹ್ಲಿ, ರಾಹುಲ್ ಬಳಿಕ 360 ಡಿಗ್ರಿ ಬ್ಯಾಟ್ಸ್`ಮನ್ ಎಬಿಡಿವಿಲಿರ್ಸ್ ಸಹ ಅಲಭ್ಯರಾಗಿದ್ಧಾರೆ.
ಕಳೆದ ವಾರ ದಕ್ಷಿಣ ಆಫ್ರಿಕಾ ಟಿ-20 ಪಂದ್ಯದ ವೇಳೆ ಬೆನ್ನಿಗೆ ಗಾಯ ಮಾಡಿಕೊಂಡಿರುವ ಡಿವಿಲಿಯರ್ಸ್ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಡೆಲ್ಲಿ ವಿರುದ್ಧ ಬೆಂಗಳೂರಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಡಿವಿಲಿಯರ್ಸ್ ಆಡಲಿದ್ದಾರೆ.
ಹಿರಿಯ ಆಟಗಾರರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಆರ್`ಸಿಬಿಯಲ್ಲಿ ಬೆಂಚ್ ಕಾಯುತ್ತಿದ್ದ ಆಟಗಾರರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಚಾನ್ಸ್ ಸಿಗಲಿದೆ. ಆದರೆ, ಅನುಭವಿ ಬೌಲಿಂಗ್ ಪಡೆ ಹೊಂದಿರುವ ಸನ್ ರೈಸರ್ಸ್ ದಾಳಿಯನ್ನ ಬೆಂಗಳೂರು ತಂಡ ಹೇಗೆ ಎದುರಿಸಲಿದೆ ಎಂಬುದನ್ನ ಕಾದುನೋಡಬೇಕಿದೆ.