ಬೆಂಗಳೂರು: ಈ ಬಾರಿ ಐಪಿಎಲ್ ಕೂಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ಸೋಲು ಅನುಭವಿಸಿದೆ. ನಿನ್ನೆ ನಡೆದ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ 5 ವಿಕೆಟ್ ಗಳ ಸೋಲನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಉತ್ತಮ ಮೊತ್ತವನ್ನೇ ಕಲೆ ಹಾಕಿತು. ಆರಂಭಿಕರಾದ ಪಾರ್ಥಿವ್ ಪಟೇಲ್ ಮತ್ತು ಕೊಹ್ಲಿ ಉತ್ತಮ ಆರಂಭ ಒದಗಿಸಿದರು. ಕೊಹ್ಲಿ 49 ಎಸೆತದಲ್ಲಿ 84, ಎಬಿಡಿ ವಿಲಿಯರ್ಸ್ 32 ಬಾಲ್ ಗಳಲ್ಲಿ 63 ರನ್ ಸಿಡಿಸಿದರು. ಇದರಿಂದಾಗಿ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು.
ಆದರೆ ಈ ಬೃಹತ್ ಮೊತ್ತ ಬೆನ್ನತ್ತುವಲ್ಲಿ ಕೆಕೆಆರ್ ಗೆ ನೆರವಾಗಿದ್ದು ಆಂಡ್ರೆ ರಸೆಲ್ ಸ್ಪೋಟಕ ಬ್ಯಾಟಿಂಗ್. ಕೇವಲ 13 ಎಸೆತಗಳಲ್ಲಿ 48 ರನ್ ಗಳಿಸಿ ರಸೆಲ್ ತಂಡವನ್ನು 19.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಮುಟ್ಟಿಸಿದರು. ಅಂತಿಮ ನಾಲ್ಕು ಓವರ್ ಗಳಲ್ಲಂತೂ ಆರ್ ಸಿಬಿ ಬೌಲಿಂಗ್ ತೀರಾ ಹಳಿ ತಪ್ಪಿತ್ತು. ಇದು ನಾಯಕ ಕೊಹ್ಲಿಯನ್ನು ಸಿಟ್ಟಿಗೆಬ್ಬಿಸಿದೆ. ಪಂದ್ಯದ ನಂತರ ಮಾತನಾಡುವಾಗ ಬೌಲರ್ ಗಳ ಮೇಲೆ ಕೆಂಡ ಕಾರಿದ ಕೊಹ್ಲಿ ಬೌಲರ್ ಗಳ ಈ ಪ್ರದರ್ಶನ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಅದೇನೇ ಇರಲಿ, ಆರ್ ಸಿಬಿ ಇನ್ನೂ ಗೆಲುವಿನ ಖಾತೆ ತೆರೆಯದೇ ಮುಜುಗರಕ್ಕೀಡಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ