Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದು ವಿಶ್ವ ತಂಬಾಕು ರಹಿತ ದಿನ

ಇಂದು ವಿಶ್ವ ತಂಬಾಕು ರಹಿತ ದಿನ
ನವದೆಹಲಿ , ಬುಧವಾರ, 31 ಮೇ 2017 (08:35 IST)
ನವದೆಹಲಿ:ವಿಶ್ವ ಆರೋಗ್ಯ ಸಂಸ್ಥೆಯ ‘ವಿಶ್ವ ತಂಬಾಕು ರಹಿತ ದಿನ - 20017’ ರ ಘೋಷವಾಕ್ಯ ‘ತಂಬಾಕು; ಅಭಿವೃದ್ಧಿಗೆ ಬೆದರಿಕೆ’. ತಂಬಾಕು ಉಪಯೋಗಕ್ಕೆ ‘ಇಲ್ಲ’ವೆಂದು ಹೇಳಿ ಆರೋಗ್ಯ ಕಾಪಾಡಿಕೊಳ್ಳೋಣ, ಬಡತನ ನಿವಾರಿಸೋಣ ಮತ್ತು ಅಭಿವೃದ್ಧಿ ಪ್ರೋತ್ಸಾಹಿಸೋಣ ಎಂದು ಪ್ರಚಾರಪಡಿಸುತ್ತಿದೆ. 
 
ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ಚಿತ್ರಗಳು ನಿಜಕ್ಕೂ ಅರ್ಥಪೂರ್ಣವಾಗಿದೆ. ಸಿಗರೇಟು ಅಥವಾ ಬೀಡಿ ಇತ್ಯಾದಿಗಳಲ್ಲಿರುವ ತಂಬಾಕಿನ ಪರಿಣಾಮದಿಂದಾಗಿ ಇಡೀ ಜಗತ್ತೇ ಹೊತ್ತಿ ಉರಿಯುವ ಸ್ಥಿತಿ ಬಂದಿದೆ. ತಂಬಾಕು ಉಪಯೋಗಿಸುವ ವ್ಯಕ್ತಿ, ವ್ಯಕ್ತಿಯ ಕುಟುಂಬ, ಸಮಾಜ, ದೇಶ, ದೇಶದ ಆರ್ಥಿಕ ವ್ಯವಸ್ಥೆ, ದೇಶದ ಅಭಿವೃದ್ಧಿ, ಹೀಗೆ ಎಲ್ಲಕ್ಕೂ ಮಾರಕವಾಗುವ ಶಕ್ತಿ ಈ ‘ತಂಬಾಕು’ ಎಂಬ ವಸ್ತುವಿಗೆ ಇದೆ ಎಂದರೆ ತಪ್ಪಲ್ಲ. ಆದ್ದರಿಂದಲೇ ಈ ಬಾರಿಯ ಈ ಗುರಿಗಳನ್ನು ಸಾದರಪಡಿಸುವಲ್ಲಿ, ವ್ಯಕ್ತಿ, ಕುಟುಂಬ, ಸಮಾಜ ಮತ್ತು ಸರ್ಕಾರ ಹೀಗೆ ಎಲ್ಲರೂ ಮಹತ್ತರ ಪಾತ್ರ ಹೊಂದಿದ್ದಾರೆ.
 
ತಂಬಾಕು ಅಥವಾ ಹೊಗೆಸೊಪ್ಪು ಎನ್ನುವಂತದ್ದು ಒಂದು ಗಿಡದ ಎಲೆ. ಆ ಎಲೆಗಳನ್ನು ಒಣಗಿಸಿ, ಪುಡಿ ಮಾಡಿ ಬೇರೆ ಬೇರೆ ರೀತಿ ಉಪಯೋಗಿಸುತ್ತಾರೆ. ಈ ತಂಬಾಕಿನಲ್ಲಿ ಇರುವ ‘ನಿಕೋಟಿನ್’ ಎಂಬ ರಾಸಾಯನಿಕ ವಸ್ತು ಚಟವನ್ನಾಗಿ ಪರಿವರ್ತಿಸುತ್ತದೆ. ತಂಬಾಕನ್ನು ಧೂಮರೂಪದಲ್ಲಿ - ಬೀಡಿ, ಸಿಗರೇಟು, ಪೈಪ್ ಮತ್ತು ಧೂಮರಹಿತರೂಪದಲ್ಲಿ - ಎಲೆ-ಅಡಿಕೆಯೊಂದಿಗೆ, ಜರ್ದಾ, ಗುಟ್ಕಾ, ನಶ್ಯಪುಡಿ ಹೀಗೆ ವಿವಿಧ ರೂಪಗಳಲ್ಲಿ ಉಪಯೋಗಿಸಲಾಗುತ್ತದೆ. ಉಪಯೋಗಿಸುವ ವಿಧಾನ ಯಾವುದೇ ಇರಲಿ ಆದರೆ ಆರೋಗ್ಯಕ್ಕೆ ಹಾನಿ ಎಂಬುದಂತು ಸತ್ಯ.
 
ತಂಬಾಕಿನಲ್ಲಿ ನಿಕೋಟಿನ್ ಒಳಗೊಂಡು 3000ದಿಂದ 4000ದವರೆಗೆ ಜೀವಕ್ಕೆ ಮಾರಕವಾಗುವಂತ ರಾಸಾಯನಿಕ ವಸ್ತುಗಳಿರುತ್ತವೆ. ‘ನಿಕೋಟಿನ್’ ಎಂಬ ವಸ್ತು ನಮ್ಮ ಮಿದುಳಿನಲ್ಲಿ ‘ಡೋಪವೀನ್’ ಎಂಬ ನರವಾಹಕ ಹೆಚ್ಚುವಂತೆ ಮಾಡುತ್ತದೆ. ಇದರಿಂದಾಗಿ ಮನಸ್ಸಿಗೆ ಸೇವಿಸಿದಾಕ್ಷಣ ಆಗುವ ಭಾವನೆ ‘ಸಂತಸ’. ಈ ಕ್ಷಣಿಕ ಸಂತಸಕ್ಕಾಗಿ ಮತ್ತೆ ಮತ್ತೆ ತಂಬಾಕು ಸೇವಿಸುವ ಆಸೆಯಾಗುತ್ತದೆ.
 
ಕೆಲವೊಮ್ಮೆ ಮನಸ್ಸಿಗೆ ಬೇಸರವಾದಾಗ, ಕೋಪ ಬಂದಾಗ ಕೂಡ ಇದನ್ನು ಸೇವಿಸುತ್ತಾರೆ. ಕೆಲವರು, ಒತ್ತಡದ ಜೀವನವನ್ನು ಎದುರಿಸಲು, ಈ ಬೀಡಿ/ಸಿಗರೇಟು ಸೇದುವಿಕೆ, ತಂಬಾಕು ಅಗಿಯುವಿಕೆಯನ್ನು ಸಾಧನವಾಗಿ ಬಳಸುತ್ತಾರೆ.  ಈ ಮಾನಸಿಕ ಒತ್ತಡ ಕಡಿಮೆಯಾಗದ ಹೊರತು, ಇದನ್ನು ಬಿಡುವುದು ಕಷ್ಟವಾಗಬಹುದು.  ಮತ್ತಷ್ಟು ಜನ, ಅದರಲ್ಲೂ ಚಿಕ್ಕ ವಯಸ್ಸಿನ ಯುವಕರು ಸ್ನೇಹಿತರಿಗಾಗಿ, ಶೋಕಿಗಾಗಿ ಕೂಡ, ಈ ಚಟಕ್ಕೆ ಬಲಿಯಾಗುತ್ತಾರೆ.
 
ಪದೇ ಪದೇ ತಂಬಾಕು ಸೇವಿಸುವುದಕ್ಕೆ ಪ್ರಾರಂಭಿಸಿದಾಗ, ಯಾವಾಗಲೋ ಒಂದು ಬಾರಿ ಸೇವಿಸುವುದನ್ನು ನಿಲ್ಲಿಸಿದರೆ, ಆಗ ಕಾಣಿಸಿಕೊಳ್ಳುವುದು ಮನಸ್ಸಿಗೆ ‘ಚಡಪಡಿಕೆ’, ಗಾಬರಿ, ಹಸಿವು, ನಿದ್ರಾಹೀನತೆ ಹಾಗೂ ಮತ್ತೆ ಬೇಕೆಂಬ ತೀವ್ರ ಬಯಕೆ... ದಿನಕಳೆದಂತೆ ಒಂದು ಸಿಗರೇಟು ಹೋಗಿ ಎರಡು ಬಾರಿ ಮೂರು ಬಾರಿ ಹೀಗೆ ನಿಧಾನವಾಗಿ ಪದೇ ಪದೇ ಸಿಗರೇಟ್ ಸೇದುವಿಕೆ ನಮ್ಮನ್ನೇ ಆವರಿಸಿಕೊಂಡುಬಿಡುತ್ತದೆ. ಒಂದುಸಲ ಸಿಗರೇಟ್ ಬಿಡಬೇಕು ಎಂದು ಎಷ್ಟೇ ಅಂದುಕೊಂಡರು ಬಿಡಲಾಗದಷ್ಟು ಕಷ್ಟವಾದ ಚಟವಾಗುತ್ತದೆ. ಆದರೆ  ಸಿಗರೇಟ್ ತ್ಯಜಿಸಲು ಕಷ್ಟವಾದರೂ ಅಸಾಧ್ಯವೇನಲ್ಲ.
 
ಸ್ವತಃ ತಂಬಾಕು ತ್ಯಜಿಸುವ ಪ್ರಯತ್ನಗಳು ವಿಫಲವಾಗಿದ್ದಲ್ಲಿ, ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ. ಏನೇ ಇರಲಿ ಇಂದೇ ತಂಬಾಕು ತ್ಯಜಿಸಿ ಆರೋಗ್ಯಕರ ಜೀವನಕ್ಕೆ ಮುನ್ನುಡಿ ಬರೆಯಿರಿ..

 
 

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಗೆ ಸ್ಪರ್ಧಿಸದಿರಲು ಜಿ.ಪರಮೇಶ್ವರ್ ಚಿಂತನೆ