ನವ ದೆಹಲಿ : ಕೊರೊನಾ ವೈರಸ್ ಈಗಾಗಲೇ ವಿಶ್ವಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಆದರೆ, ಹಲವು ದೇಶಗಳಲ್ಲಿ ಕೋವಿಡ್ - 19 ಅಬ್ಬರ ಕಡಿಮೆಯಾಗುತ್ತಿದ್ದು, ಈ ಹಿನ್ನೆಲೆ ಹಲವು ದೇಶಗಳಲ್ಲಿ ಲಾಕ್ಡೌನ್ ಮುಂತಾದ ನಿರ್ಬಂಧಗಳನ್ನು ತೆಗೆದುಹಾಕಲಾಗುತ್ತಿದೆ.
ಇದರಿಂದಾಗಿ ಜನರು ಸಹ ಕೊರೊನಾ ಮರೆತು ಮತ್ತೆ ಪ್ರವಾಸ ಮಾಡುವುದು, ಅನಗತ್ಯವಾಗಿ ಸುತ್ತಾಟ ಮಾಡುತ್ತಿದ್ದಾರೆ. ಇಂತಹ ದೇಶಗಳ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಹೌದು, ಕೊರೊನಾವೈರಸ್ನ ಡೆಲ್ಟಾ ರೂಪಾಂತರ ವೇಗವಾಗಿ ಹರಡುತ್ತಿರುವ ದೃಷ್ಟಿಯಿಂದ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕೋವಿಡ್ -19 ನಿರ್ಬಂಧಗಳನ್ನು ಅಕಾಲಿಕವಾಗಿ ತೆಗೆದುಹಾಕುವುದರ ವಿರುದ್ಧ ದೇಶಗಳಿಗೆ ಎಚ್ಚರಿಕೆ ನೀಡಿದೆ. ಮತ್ತು ಆರ್ಥಿಕತೆಗಳನ್ನು ಪುನಃ ತೆರೆಯುವಾಗ ತೀವ್ರ ಎಚ್ಚರಿಕೆ ವಹಿಸುವಂತೆ ಆಗ್ರಹಿಸಿದೆ. "ನೀವು ಗಳಿಸಿದ ಲಾಭಗಳನ್ನು ಕಳೆದುಕೊಳ್ಳದಂತೆ ನಾವು ಈ ಸಮಯದಲ್ಲಿ ಸರ್ಕಾರಗಳನ್ನು ಕೇಳುತ್ತೇವೆ" ಎಂದು ಡಬ್ಲ್ಯುಎಚ್ಒ ತುರ್ತು ಕಾರ್ಯಕ್ರಮದ ಮುಖ್ಯಸ್ಥ ಮೈಕೆಲ್ ರ್ಯಾನ್ ಜಿನೀವಾದಲ್ಲಿ ಹೇಳಿದರು.
ಸಾಂಕ್ರಾಮಿಕ ರೋಗ ಇನ್ನೂ ಮುಗಿದಿಲ್ಲ ಎಂದು ಸೋಮವಾರದ ಪತ್ರಿಕಾಗೋಷ್ಠಿಯಲ್ಲಿ, “ಕಳೆದ ಬೇಸಿಗೆಯಲ್ಲಿ ಎಲ್ಲವೂ ಒಳ್ಳೆಯದು ಎಂದು ನಾವು ಭಾವಿಸಿದಾಗ ನೆನಪಿಡಿ..! ನಾವು ಆ ವೇಳೆ ವಿಶ್ರಾಂತಿ ಪಡೆದೆವು. ಆದರೆ, ಸೆಪ್ಟೆಂಬರ್ - ಅಕ್ಟೋಬರ್ ವೇಳೆಗೆ ಕೊರೊನಾ ಸೋಂಕಿನ ಹೆಚ್ಚಳದಿಂದಾಗಿ ತೀವ್ರ ತೊಂದರೆಯಲ್ಲಿದ್ದೆವು. ಈಗ ಮತ್ತೆ ನಾವು ಅದೇ ಸ್ಥಿತಿಗೆ ಹೋಗುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಆದರೆ, ಈ ಬಾರಿ ಇನ್ನೂ ಹೆಚ್ಚಾಗಿ ಹರಡುವ ಡೆಲ್ಟಾ ರೂಪಾಂತರ ನಮ್ಮೊಂದಿಗಿದೆ'' ಎಂದೂ ರ್ಯಾನ್ ಎಚ್ಚರಿಕೆ ನೀಡಿದ್ದಾರೆ.