ಕಾನ್ಸ್ ಚಲನಚಿತ್ರೋತ್ಸವದಲ್ಲಿ ಮಹಿಳೆಯೊಬ್ಬಳು ಬೆತ್ತಲೆ ದೇಹದ ಮೇಲೆ ಉಕ್ರೇನಿನ ಧ್ವಜವನ್ನು ಬಿಡಿಸಿ ನಮ್ಮ ಮೇಲೆ ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ ಎಂಬ ಬರಹವನ್ನು ಪ್ರದರ್ಶಿಸಿದ ಘಟನೆ ಶುಕ್ರವಾರ ವರದಿಯಾಗಿದೆ.
ಮಹಿಳೆಯು ಕೆಂಪು ರಕ್ತದ ಕಲೆಯುಳ್ಳ ಒಳ ಉಡುಪುಗಳನ್ನು ಧರಿಸಿದ್ದು, ಉಕ್ರೇನಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರದ ವಿರುದ್ಧ ಘೋಷಣೆ ಕೂಗಿ ಕ್ಯಾಮೆರಾ ಮುಂದೆ ಪೋಸು ಕೊಟ್ಟಿದ್ದಾಳೆ. ನಂತರ ಕಾರ್ಯಕ್ರಮದ ಭದ್ರತಾ ಸಿಬ್ಬಂದಿ ಮಹಿಳೆಯನ್ನು ಅಲ್ಲಿಂದ ಸ್ಥಳಾಂತರಗೊಳಿಸಿದ್ದಾರೆ.
ಈ ಮೊದಲು ಉಕ್ರೇನಿನ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ರಷ್ಯಾದ ಯೋಧರು ಉಕ್ರೇನಿನ ಮಹಿಳೆಯರು ಹಾಗೂ ಪುಟ್ಟಬಾಲಕಿಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಎಂದು ಹೇಳಿದ್ದರು. ಅವರು ಕಾನ್ಸ್ನ ಉದ್ಘಾಟನಾ ಸಮಾರಂಭದಲ್ಲಿಯೂ ಉಕ್ರೇನಿಗಾಗಿ ಸಹಾಯ ಯಾಚಿಸಿ ವಿಡಿಯೋ ಬಿಡುಗಡೆ ಮಾಡಿದ್ದರು.
ಈ ಬಾರಿ ಚಲನ ಚಿತ್ರೋತ್ಸವದಲ್ಲಿ ಯುದ್ಧ ಸಂಬಂಧೀ ಚಿತ್ರಗಳನ್ನು ವಿಶೇಷವಾಗಿ ಪ್ರದರ್ಶಿಸಲಾಗುತ್ತಿದ್ದು, ಉಕ್ರೇನಿನ ಮರಿಯುಪೊಲಿಸ್2 ಹಾಗೂ ನ್ಯಾಚುರಲ್ ಹಿಸ್ಟರಿ ಆಫ್ ಡಿಸ್ಟ್ರಕ್ಷನ್ ತೆರೆ ಕಾಣುತ್ತಿವೆ.