ಲಂಡನ್: ಬಹುಕೋಟಿ ಮೊತ್ತದ ಸಾಲ ಪ್ರಕರಣದಲ್ಲಿ ಆರೋಪಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಸದ್ಯ ಲಂಡನ್ ನಲ್ಲಿ ನೆಲೆಸಿರುವುದು ಗೊತ್ತಿರುವ ವಿಚಾರವೇ. ಭಾರತದ ಕಾನೂನಿಗೆ ಮಣ್ಣೆರಚಿ ವಿದೇಶದಲ್ಲಿ ಕಳೆಯುತ್ತಿರುವ ಮದ್ಯ ದೊರೆ ನಿನ್ನೆ ನಡೆದ ಭಾರತ-ಪಾಕ್ ಪಂದ್ಯದ ವೇಳೆಗೆ ಪ್ರತ್ಯಕ್ಷರಾಗಿದ್ದಾರೆ.
ಬಿಳಿಯ ಕೋಟ್ ಧರಿಸಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಮಲ್ಯ ಪಂದ್ಯ ವೀಕ್ಷಿಸಿದ್ದಾರೆ. ಅಲ್ಲದೆ, ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ರೊಂದಿಗೆ ಮಾತನಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುನಿಲ್ ಗವಾಸ್ಕರ್ ಗೆ ತಮ್ಮ ಫೋನ್ ನಲ್ಲಿ ಏನನ್ನೋ ತೋರಿಸುತ್ತಿರುವ ಮಲ್ಯ ಫೋಟೋಗಳು ಈಗ ಹರಿದಾಡುತ್ತಿವೆ. ಭಾರತದಲ್ಲಿ 7000 ಕೋಟಿ ಸಾಲ ಮಾಡಿಕೊಂಡು ಬ್ರಿಟನ್ ಗೆ ಪಲಾಯನ ಮಾಡಿರುವ ಮಲ್ಯ ಬ್ರಿಟನ್ ನಲ್ಲೂ ಒಮ್ಮೆ ಬಂಧಿತರಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.