ಡಯಾನಾ ಪ್ರತಿಮೆ ಅನಾವರಣ
ಕೆನ್ಸಿಂಗ್ಟನ್ ಪ್ಯಾಲೇಸ್ನಲ್ಲಿ ಬ್ರಿಟನ್ ರಾಜಕುಮಾರಿ ಡಯಾನಾ ಪ್ರತಿಮೆ ಅನಾವರಣ; ತಾಯಿಯ ಹುಟ್ಟುಹಬ್ಬಕ್ಕೆ ಒಂದಾದ ಪ್ರಿನ್ಸ್ ವಿಲಿಯಂ- ಹ್ಯಾರಿ
ಲಂಡನ್ (ಜು. 2): ಬ್ರಿಟನ್ ರಾಜಕುಮಾರಿಯಾಗಿದ್ದ ಡಯಾನಾ ತನ್ನ ಸೌಂದರ್ಯ, ಜಾಣ್ಮೆ, ಗುಣಗಳಿಂದ ವಿಶ್ವದ ಗಮನ ಸೆಳೆದಿದ್ದ ಮಹಿಳೆ. ವೇಲ್ಸ್ ರಾಜಕುಮಾರಿಯಾಗಿದ್ದ ಡಯಾನಾರ 60ನೇ ಜನ್ಮ ದಿನದ ಅಂಗವಾಗಿ ಅವರ ಪ್ರತಿಮೆಯನ್ನು ಡಯಾನಾ ವಾಸಿಸುತ್ತಿದ್ದ ಲಂಡನ್ನ ಕೆನ್ಸಿಂಗ್ಟನ್ ಪ್ಯಾಲೇಸ್ನಲ್ಲಿರುವ ಸಂಕನ್ ಗಾರ್ಡನ್ನಲ್ಲಿ ಸ್ಥಾಪಿಸಲಾಗಿದೆ.
ತಮ್ಮ ತಾಯಿ ಡಯಾನಾ ಪ್ರತಿಮೆಯನ್ನು ಅವರ ಮಕ್ಕಳಾದ ರಾಜಕುಮಾರ ವಿಲಿಯಂ ಮತ್ತು ಹ್ಯಾರಿ ಅನಾವರಣಗೊಳಿಸಿದ್ದು ವಿಶೇಷವಾಗಿತ್ತು.
ನಿನ್ನೆ ಡಯಾನಾ ಅವರ 60ನೇ ಹುಟ್ಟುಹಬ್ಬ. ಡಯಾನಾ 1997ರಲ್ಲಿ ಪ್ಯಾರೀಸ್ನಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆಗಿನ್ನೂ ಪ್ರಿನ್ಸ್ ವಿಲಿಯಂ ಮತ್ತು ಹ್ಯಾರಿ ಬಹಳ ಚಿಕ್ಕವರಾಗಿದ್ದರು. ಇದೀಗ ತಮ್ಮ ತಾಯಿಯ ಸ್ಮರಣಾರ್ಥ ಅವರಿಬ್ಬರೂ ಒಂದಾಗಿ ತಮ್ಮ ಹಳೆಯ ಬಂಗಲೆಯ ಬಳಿ ಇರುವ ಸಂಕನ್ ಗಾರ್ಡನ್ನಲ್ಲಿ ಡಯಾನಾರ ಪ್ರತಿಮೆಯನ್ನು ಅನಾವರಣ ಮಾಡಿದ್ದಾರೆ.
ಕೊರೋನಾವೈರಸ್ ಅಟ್ಟಹಾಸದ ಹಿನ್ನೆಲೆಯಲ್ಲಿ ಬಹಳ ಸರಳವಾಗಿ ಈ ಸಮಾರಂಭವನ್ನು ನಡೆಸಲಾಯಿತು. ನಮ್ಮ ತಾಯಿಯ ಈ ಪುತ್ಥಳಿಯನ್ನು ಅನಾವರಣಗೊಳಿಸುವ ಮೂಲಕ ಮತ್ತೊಮ್ಮೆ ಆಕೆಯ ಪ್ರೀತಿ, ಶಕ್ತಿ, ಗುಣವನ್ನು ನಾವು ನೆನಪಿಸಿಕೊಳ್ಳುತ್ತಿದ್ದೇವೆ. ಆಕೆ ತನ್ನ ನಿಷ್ಕಲ್ಮಶವಾದ ಗುಣದಿಂದಲೇ ಇಡೀ ವಿಶ್ವಾದ್ಯಂತ ಗಮನ ಸೆಳೆದಿದ್ದರು. ಕಷ್ಟದಲ್ಲಿದ್ದವರಿಗೆ ಸದಾ ಸಹಾಯ ಮಾಡುತ್ತಿದ್ದರು. ಅದಕ್ಕೆ ಆಕೆಯ ಅಂತಸ್ತು, ಅಧಿಕಾರ ಎಂದಿಗೂ ಅಡ್ಡಿ ಬರಲಿಲ್ಲ ಎಂದು ಪ್ರಿನ್ಸ್ ವಿಲಿಯಂ ಹೇಳಿದ್ದಾರೆ.
ನಮ್ಮ ತಾಯಿ ಡಯಾನಾ ನಮ್ಮ ಜೊತೆ ಈಗಲೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಪ್ರತಿದಿನವೂ ನಾವು ಅಂದುಕೊಳ್ಳುತ್ತೇವೆ. ಈ ಪ್ರತಿಮೆ ಆಕೆಯ ಜೀವನದ ದ್ಯೋತಕವಾಗಿ, ಪ್ರೀತಿಯ ಸಂಕೇತವಾಗಿರಲಿದೆ. ಈ ಮೂಲಕ ಆಕೆ ನಮ್ಮ ನಡುವೆಯೇ ಇದ್ದಾಳೆ ಎಂದು ನಾವು ಸಮಾಧಾನಪಟ್ಟುಕೊಳ್ಳುತ್ತೇವೆ ಎಂದು ಇನ್ನೋರ್ವ ಪುತ್ರ ಪ್ರಿನ್ಸ್ ಹ್ಯಾರಿ ಹೇಳಿದ್ದಾರೆ.
ಪ್ರಿನ್ಸ್ ವಿಲಿಯಂ ಮತ್ತು ಹ್ಯಾರಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದೇ ಕಡಿಮೆ. ಇದೀಗ ತಮ್ಮ ತಾಯಿಯ ಪ್ರತಿಮೆ ಅನಾವರಣಕ್ಕೆ ಒಂದಾಗಿ ಕಾಣಿಸಿಕೊಂಡಿರುವುದು ಇಂಗ್ಲೆಂಡ್ನ ಗಮನ ಸೆಳೆದಿದೆ. ಹ್ಯಾರಿ ಅಮೆರಿಕದ ಮಾಜಿ ಕಿರುತೆರೆ ನಟಿ ಮೇಘನ್ ಮಾರ್ಕ್ಲೆ ಅವರನ್ನು ಮದುವೆಯಾದ ನಂತರ ತಮ್ಮ ಅಣ್ಣನೊಂದಿಗೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಅಣ್ಣ ತಮ್ಮಂದಿರು ಒಟ್ಟಾಗಿ ತಮ್ಮ ತಾಯಿಯ ಪುತ್ಥಳಿ ಅನಾವರಣಗೊಳಿಸುವ ಮೂಲಕ ಡಯಾನಾಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ಎಂದು ಇಂಗ್ಲೆಂಡ್ನ ಮಾಧ್ಯಮಗಳು ವರದಿ ಮಾಡಿವೆ.