ನವದೆಹಲಿ(ಆ.11): ಆಗಸ್ಟ್ ತಿಂಗಳು ಭಾರತದ ಪಾಲಿಗೆ ಅತ್ಯಂತ ಸ್ಮರಣೀಯವಾಗಿದೆ. ಸ್ವಾತಂತ್ರ್ಯ ಸಿಕ್ಕ ಬಳಿಕ ವಿಶ್ವಮಟ್ಟದಲ್ಲಿ ಭಾರತ ತನ್ನದೇ ಚಾಪು ಮೂಡಿಸುತ್ತಿದೆ. ಒಲಿಂಪಿಕ್ಸ್ನ ಅಥ್ಲೀಟಿಕ್ಸ್ ವಿಭಾಗದಲ್ಲಿ ಮೊದಲ ಬಾರಿಗೆ ಚಿನ್ನ ಗೆದ್ದ ಸಾಧನೆಯನ್ನೂ ಮಾಡಿದೆ. ಇನ್ನು ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗಿದೆ.
ಇದೀಗ ಇದೇ ಆಗಸ್ಟ್ ತಿಂಗಳಲ್ಲಿ ಭಾರತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಳಿಕ ಇದೀಗ ಭಾರತದ ವಿದೇಶಾಂಗ ಸಚಿವ ಜೈಶಂಕರ್ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನೆ ಹಾಗೂ ಶಾಂತಿಪಾಲನೆ ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲು ಜೈಶಂಕರ್ ಮುಂದಿನ ವಾರ ನ್ಯೂಯಾರ್ಕ್ಗೆ ಪ್ರಯಾಣ ಮಾಡಲಿದ್ದಾರೆ. ಆಗಸ್ಟ್ 18 ಮತ್ತು 19ರಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನೆ ಹಾಗೂ ಶಾಂತಿಪಾಲನೆ ಸಭೆ ನಡೆಯಲಿದ್ದು, ಜೈಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಆಗಸ್ಟ್ 16 ರಂದು ಜೈಶಂಕರ್ ನ್ಯೂಯಾರ್ಕ್ಗೆ ತೆರಳಲಿದ್ದಾರೆ. ಎರಡು ಸಭೆಗಳಲ್ಲಿ ಪಾಲ್ಗೊಂಡ ಬಳಿಕ ಜೈಶಂಕರ್ ಭಾರತಕ್ಕೆ ಮರಳಲಿದ್ದಾರೆ. ಬಳಿಕ ಹಲವು ದಿನಗಳಿಂದ ಬಾಕಿ ಉಳಿದಿರುವ ದ್ವಿಪಕ್ಷೀಯ ಭೇಟಿಗಾಗಿ ನ್ಯೂಯಾರ್ಕ್ ಮೂಲಕ ಮೆಕ್ಸಿಕೋ, ಗಯಾನ ಹಾಗೂ ಪನಾಮಾಗೆ ಪ್ರಯಾಣ ಬೆಳೆಸಲಿದ್ದಾರೆ.
ಸದ್ಯ ಭಯೋತ್ಪಾದನೆ ಹಾಗೂ ಶಾಂತಿಪಾಲನೆ ಅತ್ಯಂತ ಅವಶ್ಯಕ ಸಭೆಯಾಗಿದೆ. ಕಾರಣ ಆಫ್ಘಾನಿಸ್ತಾನದಲ್ಲಿ ಹೆಚ್ಚಾಗುತ್ತಿರುವ ತಾಲಿಬಾನ್ ಉಗ್ರರ ಉಪಟಳ, ಹಲವು ದೇಶಗಳು ಎದುರಿಸಿದು ಭಯೋತ್ಪಾದನೆ ಆತಂಕಗಳಿಂದ ಈ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ. ಪಾಕಿಸ್ತಾನ ಪೋಷಿತ ಉಗ್ರ ಸಂಘಟನೆಗಳು ಇದೀಗ ಆಫ್ಘಾನಿಸ್ತಾನ, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತನ್ನ ಕೃತ್ಯ ಎಸೆಗುತ್ತಿದೆ. 1986ರಿಂದ ಭಾರತ ಭಯೋತ್ಪಾದನೆ ವಿರುದ್ಧ ಹಾಗೂ ಭಯೋತ್ಪಾದನೆಯನ್ನು ಹತ್ತಿಕ್ಕಲು ಕಠಿಣ ಕ್ರಮದ ಅಗತ್ಯತೆಯನ್ನು ಒತ್ತಿಹೇಳುತ್ತಲೇ ಬಂದಿತ್ತು. ಆದರೆ ಹಲವು ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳಿಗೆ ಭಯೋತ್ಪಾದನೆ ಕಲ್ಪನೆಯೆ ಇರಲಿಲ್ಲ. ಇದೀಗ ಬಹುತೇಕ ಎಲ್ಲಾ ರಾಷ್ಟ್ರಗಳು ಒಂದಲ್ಲಾ ಒಂದು ರೀತಿಯಿಂದ ಭಯೋತ್ಪಾದನೆ ದಾಳಿಗೆ ನಲುಗಿದೆ. ಹೀಗಾಗಿ ವಿಶ್ವಸಂಸ್ತೆ ಭದ್ರತಾ ಮಂಡಳಿಯಲ್ಲಿ ನಡೆಯಲಿರುವ ಭಯೋತ್ಪಾದನೆ ಹಾಗೂ ಶಾಂತಿಪಾಲನೆ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ.