ಲಂಡನ್: ಬ್ರಿಟನ್ ನಲ್ಲಿ ನಡೆದ ಚುನಾವಣೆಯಲ್ಲಿ ಪ್ರಧಾನಿ ಥೆರೇಸಾ ಮೇ ಹಾಗೂ ಆಡಳಿತಾ ರೂಢ ಕನ್ಸರ್ವೇಟಿವ್ ಪಕ್ಷಕ್ಕೆ ತೀವ್ರ ಹಿನ್ನಡೆ ಉಂಟಾಗಿದ್ದು, ಚುನಾವಣೆಯಲ್ಲಿ ಥೆರೆಸಾ ಮೇ ಸರ್ಕಾರ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.
ಆಡಳಿತಾ ರೂಢ ಕನ್ಸರ್ವೇಟಿವ್ ಪಕ್ಷ ಮತ್ತು ವಿಪಕ್ಷ ಲೇಬರ್ ಪಕ್ಷ ಸೇರಿದಂತೆ ಯಾವುದೇ ಪಕ್ಷವೂ ಕೂಡ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಪರಿಣಾಮ ಬ್ರಿಟನ್ ಸಂಸತ್ ಇದೀಗ ತ್ರಿಶಂಕು ಸ್ಥಿತಿಗೆ ತಲುಪಿದ್ದು, 3 ವರ್ಷಗಳ ಮೊದಲೇ ನಡೆದ ಚುನಾವಣಾ ನಿಜಕ್ಕೂ ಪ್ರಧಾನಿ ಥೆರೆಸಾ ಮೇ ಅವರಿಗೆ ತಿರುಗುಬಾಣವಾಗಿ ಪರಿಣಮಿಸಿದೆ.
650 ಸದಸ್ಯ ಬಲದ ಬ್ರಿಟಿಷ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಈವರೆಗೂ 647 ಸ್ಥಾನಗಳ ಫಲಿತಾಂಶ ಬಹಿರಂಗವಾಗಿದೆ. ಅದರಂತೆ ಆಡಳಿತಾ ರೂಢ ಕನ್ಸರ್ವೇಟಿವ್ ಪಕ್ಷ 316 ಸ್ಥಾನಗಳನ್ನು ಪಡೆದಿದ್ದು, ವಿಪಕ್ಷ ಲೇಬರ್ ಪಾರ್ಟಿ 261 ಸ್ಥಾನಗಳನ್ನು ಪಡೆದುಕೊಂಡಿದೆ. ಬಲವಾದ ಜನಾದೇಶವನ್ನು ಪಡೆಯಬೇಕೆಂಬ ಪ್ರಧಾನಿ ತೆರೇಸಾ ಮೇ ಅವರ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು, ಅವರು ತನ್ನ ಹುದ್ದೆಯನ್ನು ತ್ಯಜಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.