ನ್ಯೂಯಾರ್ಕ್: ಪ್ರಧಾನಿ ಮೋದಿಯನ್ನು ಭಾರತದ ರಾಷ್ಟ್ರಪಿತ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆ ಈಗ ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾಗಿದೆ.
ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ. ಆದರೆ ಮೋದಿಯನ್ನು ಹೊಗಳುವ ಭರದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ರಾಷ್ಟ್ರಪಿತ ಎಂದಿದ್ದು ಕೆಲವರಿಗೆ ಇಷ್ಟವಾಗಿಲ್ಲ, ಮತ್ತೆ ಕೆಲವರು ಮೋದಿ ವಿರೋಧಿಗಳಿಗೆ ಇದೇ ಅಸ್ತ್ರ ಬಳಸಿ ಟಾಂಗ್ ಕೊಟ್ಟಿದ್ದಾರೆ.
ಹಲವು ಮೆಮೆಗಳ ಮೂಲಕ ಪ್ರತಿಕ್ರಿಯಿಸಿರುವ ಟ್ವಿಟರಿಗರು ಟ್ರಂಪ್ ಹೇಳಿಕೆಯನ್ನು ಟ್ರೋಲ್ ಮಾಡಿದ್ದಾರೆ. ಟ್ರಂಪ್ ಭಾರತದ ಇತಿಹಾಸ ತಿಳಿಯಬೇಕು. ಬಹುಶಃ ಅವರಿಗೆ ಗಾಂಧೀಜಿಯನ್ನು ಮರೆತುಹೋಗಿದೆ ಎಂದು ಕೆಲವರು ತಮಾಷೆ ಮಾಡಿದರೆ ಮತ್ತೆ ಕೆಲವರು ಮೋದಿ ಭಾರತಕ್ಕೆ ಏನು ಮಾಡಿದ್ದಾರೆ? ಸ್ವಾತಂತ್ರ್ಯಕ್ಕಾಗಿ ಹೋರಾಡಿದರೇ? ಎಂದು ವ್ಯಂಗ್ಯ ಮಾಡಿದ್ದಾರೆ.
ಮತ್ತೆ ಕೆಲವರು ಮಹಾರಾಷ್ಟ್ರ ಸಿಎಂ ಫಡ್ನವಿಸ್ ಪತ್ನಿ ಅಮೃತಾ ಹಿಂದೊಮ್ಮೆ ಟ್ವಿಟರ್ ನಲ್ಲಿ ಮೋದಿಯನ್ನು ಭಾರತದ ರಾಷ್ಟ್ರಪಿತ ಎಂದು ಕರೆದಿದ್ದನ್ನೇ ಉಲ್ಲೇಖಿಸಿ ಬಹುಶಃ ಟ್ರಂಪ್ ಭಾಷಣವನ್ನು ಅಮೃತಾ ಬರೆದಿರಬೇಕು ಎಂದು ತಮಾಷೆ ಮಾಡಿದ್ದಾರೆ.
ಇನ್ನು ಕೆಲವರು ಟ್ರಂಪ್ ಹೇಳಿಕೆಯನ್ನು ಸಮರ್ಥಿಸಿದ್ದು, ಬಹುಶಃ ಲಿಬರಲ್ ಗಳಿಗೆ ಈಗ ಬರ್ನಲ್ ಬೇಕಾಗಬಹುದು ಎಂದು ವ್ಯಂಗ್ಯ ಮಾಡಿದ್ದಾರೆ.