ಲಂಡನ್ : ಒಂದು ವರ್ಷದಲ್ಲಿ 7 ನವಜಾತ ಶಿಶುಗಳನ್ನ ಹತ್ಯೆಗೈದು, ಇನ್ನೂ 6 ಶಿಶುಗಳನ್ನ ಕೊಲ್ಲಲು ಪ್ರಯತ್ನಿಸಿದ್ದ ಬ್ರಿಟಿಷ್ ನರ್ಸ್ಗೆ (33) ಇಂಗ್ಲೆಂಡಿನ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ (ಕ್ರೌನ್ ಪ್ರಾಸಿಕ್ಯೂಷನ್ ಸೇವೆ) ಜೀವಾವಧಿ ಶಿಕ್ಷೆ ವಿಧಿಸಿದೆ.
ಆಕೆ ಇನ್ನು ಲೂಸಿ ಲೆಟ್ಬಿಗೆ ಕ್ರೌನ್ ಕೋರ್ಟ್ನಲ್ಲಿ ಲಭ್ಯವಿರುವ ಅತ್ಯಂತ ಕಠಿಣ ಶಿಕ್ಷೆಯನ್ನ ವಿಧಿಸಲಾಗಿದೆ. ಆಕೆ ತನ್ನ ಉಳಿದ ಜೀವನವನ್ನು ಕೋರ್ಟ್ನಲ್ಲಿ ಕಳೆಯುತ್ತಾಳೆ ಎಂದು ಮ್ಯಾಂಚೆಸ್ಟರ್ ನ್ಯಾಯಾಧೀಶ ಜೇಮ್ಸ್ ಗಾಸ್ ಹೇಳಿದ್ದಾರೆ.
ಒಂದೇ ವರ್ಷದಲ್ಲಿ 7 ಶಿಶುಗಳ ಹತ್ಯೆ
ಲೂಸಿ ಲೆಟ್ಬಿ ಎಂದು ಗುರುತಿಸಲ್ಪಟ್ಟ ಬ್ರಿಟಿಷ್ ನರ್ಸ್ 2015ರ ಜೂನ್ ರಿಂದ 2016ರ ಜೂನ್ ನಡುವೆ ವಾಯವ್ಯ ಇಂಗ್ಲೆಂಡ್ನ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯಲ್ಲಿ ಈ ಸರಣಿ ಕೊಲೆಗಳನ್ನ ಮಾಡಿದ್ದಾಳೆ.
ಕಳೆದ ಅಕ್ಟೋಬರ್ನಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಕಳೆದ ಶುಕ್ರವಾರ ಈ ಕುರಿತು ವಿಚಾರಣೆ ನಡೆಸಿದ ಇಂಗ್ಲೆಂಡ್ನ ಮ್ಯಾಂಚೆಸ್ಟರ್ ಕೋರ್ಟ್ ಶಿಶುಹತ್ಯೆಯ ಆರೋಪಿ ನರ್ಸ್ಗೆ ಶಿಕ್ಷೆ ವಿಧಿಸಲು ಮುಂದಾಗಿತ್ತು. ಈಕೆಗೆ ಶಿಕ್ಷೆ ವಿಧಿಸಲು ಭಾರತೀಯ ಮೂಲದ ಮಕ್ಕಳ ವೈದ್ಯರ ಸಲಹೆಗಾರ ಡಾ. ರವಿ ಜಯರಾಮ್ ಸಹಕರಿಸಿದ್ದರು. ಇದರಿಂದಾಗಿ ಭಾರತೀಯ ಮೂಲದ ವೈದ್ಯನಿಗೆ ಭಾರೀ ಪ್ರಸಂಶೆ ವ್ಯಕ್ತವಾಗಿತ್ತು.
ಮೊದಲಬಾರಿಗೆ 2015 ರಲ್ಲಿ ನರ್ಸ್ ಕೃತ್ಯ ಬೆಳಕಿಗೆ ಬಂದಿತ್ತು. ಅದೇ ವರ್ಷ ಮೂವರು ಮಕ್ಕಳು ಸಾವನ್ನಪ್ಪಿದ್ದವು. ಕೊನೆಗೆ ಏಪ್ರಿಲ್ 2017 ರಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆ ಟ್ರಸ್ಟ್, ಪೊಲೀಸರು ವೈದ್ಯರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ನಂತರ ಪ್ರಕರಣದ ತನಿಖೆ ಮುಂದುವರಿಯಿತು.