ಪಾಕಿಸ್ತಾನ ಆಕ್ರಮಿತ ಕಾಶ್ಮಿರದಲ್ಲಿರುವ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನಾಪಡೆ ಸೀಮಿತ ದಾಳಿ ನಡೆಸಿದೆ ಎನ್ನುವುದೆಲ್ಲಾ ಸುಳ್ಳಿನ ಕಂತೆ ಎಂದು ಹೇಳಿಕೆ ನೀಡಿದ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್‌ಗೆ ಪಾಕಿಸ್ತಾನದ ಪೊಲೀಸ್ ಅಧಿಕಾರಿಯೇ ಉತ್ತರ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಸಂದರ್ಶನ ನೀಡಿದ ಪಿಒಕೆಯ ಮೀರ್ಪುರ್ ರೇಂಜ್‌ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಲಾಮ್ ಅಕ್ಬರ್, ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯಲ್ಲಿ 12 ಉಗ್ರರು ಹತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತೀಯ ಸೇನಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ. ಆದರೆ, ಪ್ರಧಾನಿ ನವಾಜ್ ಷರೀಫ್ ಕೇವಲ ಇಬ್ಬರು ಸೈನಕರು ಹತರಾಗಿದ್ದಾರೆ ಎಂದು ಸಂಸತ್‌ಗೆ ಸುಳ್ಳು ಮಾಹಿತಿ ನೀಡಿರುವುದನ್ನು ಬಹಿರಂಗಗೊಳಿಸಿದ್ದಾರೆ.
ಭಿಂಭರ್, ನೀಲಮ್‌ನಲ್ಲಿರುವ ದುದ್‌ನಿಯಾಲ್ ಪೂಂಚ್‌ನಲ್ಲಿರುವ ಹಜಿರಾ ಹಾಗೂ ಹತಿಯಾ ಬಾಲಾದಲ್ಲಿರುವ ಕಯಾನಿ ಪ್ರದೇಶದಲ್ಲಿ ಭಾರತೀಯ ಸೇನೆ ಸೆಪ್ಟೆಂಬರ್ 29 ರ ರಾತ್ರಿ ದಾಳಿ ನಡೆಸಿತ್ತು ಎಂದು ತಿಳಿಸಿದ್ದಾರೆ.
ಭಾರತೀಯ ಸೀಮಿತ ದಾಳಿ ನಡೆಸಿ ಉಗ್ರರನ್ನು ಹತ್ಯೆಗೈದು ಮರಳುತ್ತಿದ್ದಂತೆ ಪಾಕಿಸ್ತಾನದ ಸೇನೆ ಸಂಪೂರ್ಣ ಪ್ರದೇಶವನ್ನು ಹಿಡಿತಕ್ಕೆ ತೆಗೆದುಕೊಂಡು ಮೃತ ಉಗ್ರರ ದೇಹಗಳನ್ನು ತೆಗೆದುಕೊಂಡು ಹೋಗಿ ಗ್ರಾಮಗಳಲ್ಲಿ ಹೂತು ಹಾಕಿದೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಲಾಮ್ ಅಕ್ಬರ್ ನೀಡಿದ ಹೇಳಿಕೆ ಮತ್ತು ಡಿಜಿಎಂಒ ರಣಬೀರ್ ಸಿಂಗ್ ನೀಡಿದ ಹೇಳಿಕೆಗೆ ಸಂಪೂರ್ಣವಾಗಿ ಸಾಮ್ಯತೆ ಕಂಡುಬಂದಿದೆ.
ನಮ್ಮ ಪಾಕಿಸ್ತಾನಿ ಸೇನೆ ಉಗ್ರರಿಗೆ ನೆರವು ನೀಡಿ ಅವರಿಗೆ ವಾಸಿಸಲು ವ್ಯವಸ್ಥೆ ಮಾಡಿ ಭಾರತದ ಗಡಿ ದಾಟಲು ನೆರವಾಗುತ್ತಿರುವುದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ಪಾಕಿಸ್ತಾನದ ಮಿರ್ಪುರ್ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಲಾಮ್ ಅಕ್ಬರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ