ನವದೆಹಲಿ: ಪಾಕಿಸ್ಥಾನದ ನಾಲ್ಕು ತಿಂಗಳ ಮಗು ರೋಹಾನ್ ಗೆ ನೋಯ್ಡಾ ಆಸ್ಪತ್ರೆಯಲ್ಲಿ ಯಶಸ್ವೀ ಹೃದಯ ಶಸ್ತ್ರಚಿಕಿತ್ಸೆ ನರವೇರಿದೆ. ಈ ಹಿನ್ನಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕೃತಜ್ನತೆ ಸಲ್ಲಿಸಿರುವ ಮಗುವಿನ ತಂದೆ ಕಮಾಲ್ ಸಿದ್ದಿಕಿ ಇತರ ಪಾಕಿಸ್ತಾನಿಯರಿಗೂ ಭಾರತ ವೈದ್ಯಕೀಯ ವೀಸಾದ್ವಾರವನ್ನು ತೆರೆಯಬೇಕು ಎಂದು ವಿನಂತಿಸಿದ್ದಾರೆ.
ಮೆಡಂ ಸುಷ್ಮಾ ಸ್ವರಾಜ್ ಅವರು ವೈದ್ಯಕೀಯ ವೀಸಾ ನೀಡಿದ್ದರಿಂದ ನನ್ನ ಮಗ ಇಂದು ಜೀವಂತವಾಗಿದ್ದಾನೆ. ಅವನ ಹೃದಯ ಸ್ವಚ್ಛಂದವಾಗಿ ಬಡಿಯುತ್ತಿದೆ. ಹೀಗಾಗಿ ಕಾಯಿಲೆಯಿಂದ ಬಳಲುತ್ತಿರುವ ಪಾಕಿಸ್ತಾನದ ಮಂದಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಭಾರತ ತೆರದ ಬಾಗಿಲಾಗಲಿ ಎಂದು ತಿಳಿಸಿದ್ದಾರೆ.
ಪಾಕಿಸ್ಥಾನದ ನಾಲ್ಕು ತಿಂಗಳ ಮಗು ರೋಹಾನ್ ನನ್ನು ಜುಲೈ 12ರಂದು ನೋಯ್ಡಾದ ಜೇಪೀ ಆಸ್ಪತ್ರೆಗೆ ಹೃದಯ ಶಸ್ತ್ರಚಿಕಿತ್ಸೆಗಾಗಿ ಕರೆತರಲಾಗಿತ್ತು. ಡಾ. ರಾಜೇಶ್ ಶರ್ಮಾ ನೇತೃತ್ವದ ವೈದ್ಯರ ತಂಡದಿಂದ ಜು.14ರಂದು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ರೋಹಾನ್‌ಗೆ ಹೃದಯದಲ್ಲಿ ಒಂದು ತೂತು ಇತ್ತು. ಹಾಗಾಗಿ ಹೃದಯದ ಎಡಭಾಗದಲ್ಲಿರುವ ಅಯೋರ್ಟಾ ಬಲಭಾಗಕ್ಕೆ ಬರುತ್ತಿತ್ತು. ಹಾಗಾಗಿ ರೋಹಾನ್ ಗೆ ಉಸಿರಾಟದ ತೊಂದರೆ ಇತ್ತು ಮತ್ತು ನ್ಯೂಮೋನಿಯಾ ಕೂಡ ಬಾಧಿಸುತ್ತಿತ್ತು ಎಂದು ವೈದ್ಯರು ಹೇಳಿದ್ದು ಶಸ್ತ್ರ ಚಿಕಿತ್ಸೆಯ ಬಳಿಕ ರೋಹಾನ್ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.