ನವದೆಹಲಿ : ಮೂರನೇ ಮಹಾಯುದ್ಧ ನಡೆದರೆ ಅದು ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡಿರುತ್ತದೆ.
ಜೊತೆಗೆ ವಿನಾಶಕಾರಿಯಾಗಿರುತ್ತದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ. ಕೀವ್ ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಂಡರೆ ನಿಜವಾದ ಅಪಾಯ ಎದುರಿಸಬೇಕಾಗುತ್ತದೆ ಎಂದು ಉಕ್ರೇನ್ಗೆ ಲಾವ್ರೊವ್ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ರಷ್ಯಾದ ಪಡೆಗಳು ಉಕ್ರೇನ್ನ ಎರಡನೇ ನಗರ ಖಾರ್ಕಿವ್ನ ಮಧ್ಯಭಾಗದಲ್ಲಿರುವ ಸ್ಥಳೀಯ ಸರ್ಕಾರದ ಪ್ರಧಾನ ಕಛೇರಿಯ ಮೇಲೆ ಭೀಕರ ದಾಳಿ ನಡೆಸಿತು. ಇದರಿಂದ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಉಕ್ರೇನ್ ರಾಜಧಾನಿ ಕೀವ್ನ ಟೆಲಿವಿಷನ್ ಟವರ್ ಮೇಲೂ ರಷ್ಯಾ ದಾಳಿ ನಡೆಸಿದ್ದು, ಐವರು ಬಲಿಯಾಗಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜೊತೆಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೂರವಾಣಿ ಕರೆಯಲ್ಲಿ ಮಾತನಾಡಿ, ಆಕ್ರಮಣಕಾರಿ ರಷ್ಯಾವನ್ನು ತಡೆಯಬೇಕು ಎಂದು ತಿಳಿಸಿದ್ದಾರೆ.