Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೆಲ ಗಂಟೆಗಳ ಅಂತರದಲ್ಲಿ ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಮತ್ತು ದಕ್ಷಿಣ ಕೊರಿಯಾ

ಕೆಲ ಗಂಟೆಗಳ ಅಂತರದಲ್ಲಿ ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಮತ್ತು ದಕ್ಷಿಣ ಕೊರಿಯಾ
ಸಿಯೋಲ್ , ಗುರುವಾರ, 16 ಸೆಪ್ಟಂಬರ್ 2021 (08:10 IST)
ಸಿಯೋಲ್, ಸೆ.16 : ಬುಧವಾರ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳು ಕೆಲವೇ ಗಂಟೆಗಳ ಅಂತರದಲ್ಲಿ ತಮ್ಮ ಪ್ರಕ್ಷೇಪಕ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿವೆ ಎಂದು ಎಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಭಾರತೀಯ ಕಾಲಮಾನ ಬುಧವಾರ ಬೆಳಿಗ್ಗೆ 6 ಗಂಟೆಗೆ ಉತ್ತರ ಕೊರಿಯಾ ತನ್ನ ಪೂರ್ವ ಕರಾವಳಿಯಲ್ಲಿ ಗುರುತಿಸಲಾಗದ 2 ಕ್ಷಿಪಣಿಗಳನ್ನು ಉಡಾಯಿಸಿದೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಗುಪ್ತಚರ ವಿಭಾಗ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿವೆ ಎಂದು ದಕ್ಷಿಣ ಕೊರಿಯಾ ರಕ್ಷಣಾ ಪಡೆಯ ಜಂಟಿ ಮುಖ್ಯಸ್ಥರ ಹೇಳಿಕೆ ತಿಳಿಸಿದೆ. ಗರಿಷ್ಟ 60 ಕಿ.ಮೀ ಎತ್ತರದಲ್ಲಿ ಹಾರಿದ ಈ ಕ್ಷಿಪಣಿ ಸುಮಾರು 800 ಕಿ.ಮೀ ದೂರ ಸಾಗಿದೆ.
ಕೊರಿಯಾ ದ್ವೀಪಸಮುದಾಯದ ಪೂರ್ವ ತೀರದತ್ತ ಸಾಗಿದ ಕ್ಷಿಪಣಿ, ಜಪಾನ್ನ ಆರ್ಥಿಕ ವಲಯ ವ್ಯಾಪ್ತಿಯ ಹೊರಭಾಗದ ಪ್ರದೇಶಕ್ಕೆ ಅಪ್ಪಳಿಸಿದೆ ಎಂದು ವರದಿಯಾಗಿದೆ.
ಕಳೆದ ವಾರಾಂತ್ಯ ಉತ್ತರ ಕೊರಿಯಾ ದೀರ್ಘವ್ಯಾಪ್ತಿಯ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದು ಈ ಕ್ಷಿಪಣಿ ಜಪಾನ್ ದೇಶವನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದು ಮೂಲಗಳು ಹೇಳಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಪಾನ್ ಪ್ರಧಾನಿ ಯೊಶಿಹಿದೆ ಸುಗಾ ' ಕ್ಷಿಪಣಿ ಪರೀಕ್ಷೆಯು ಜಪಾನ್ ಮತ್ತು ಈ ವಲಯದ ಸುರಕ್ಷತೆಯ ಮೇಲಿನ ಬೆದರಿಕೆಯಾಗಿದೆ. ನಮ್ಮ ಜಾಗರೂಕತೆ ಮತ್ತು ಕಣ್ಗಾವಲನ್ನು ಮತ್ತಷ್ಟು ಹೆಚ್ಚಿಸಲು ಹಾಗೂ ಯಾವುದೇ ಆಕಸ್ಮಿಕ ಸಂದರ್ಭಗಳಿಗೆ ಸನ್ನದ್ಧರಾಗಿರಲು ಜಪಾನ್ ಸರಕಾರ ನಿರ್ಧರಿಸಿದೆ' ಎಂದಿದ್ದಾರೆ.
ಅಂತರ್ ರಾಷ್ಟ್ರೀಯ ಕಾನೂನಿನಲ್ಲಿ ಉತ್ತರ ಕೊರಿಯಾಕ್ಕೆ ಪರಮಾಣು ಪರೀಕ್ಷೆ ಅಥವಾ ಪ್ರಕ್ಷೇಪಕ ಕ್ಷಿಪಣಿ ಪರೀಕ್ಷೆಗೆ ಅವಕಾಶವಿಲ್ಲ. ಆದರೆ ಬುಧವಾರ ಉತ್ತರ ಕೊರಿಯಾ ಉಡಾಯಿಸಿದ ಕ್ಷಿಪಣಿ ಕಡಿಮೆ ದೂರವ್ಯಾಪ್ತಿಯದ್ದಾಗಿರುವುದರಿಂದ ತಕ್ಷಣವೇ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಹೊಸ ನಿರ್ಬಂಧ ಜಾರಿಯಾಗುವ ಸಾಧ್ಯತೆಯಿಲ್ಲ ಎಂದು ಎಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ, ಉ.ಕೊರಿಯಾದ ಕ್ಷಿಪಣಿ ಪರೀಕ್ಷೆಯ ಕೆಲ ಗಂಟೆಗಳ ಬಳಿಕ ತಾನು ಸಬ್ಮೆರೀನ್ನಿಂದ ಉಡಾಯಿಸುವ ಪ್ರಕ್ಷೇಪಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿರುವುದಾಗಿ ದಕ್ಷಿಣ ಕೊರಿಯಾ ಘೋಷಿಸಿದೆ. ದೇಶೀಯವಾಗಿ ನಿರ್ಮಿಸಿರುವ ಈ ಕ್ಷಿಪಣಿ ಉದ್ದೇಶಿತ ಗುರಿ ತಲುಪಿದ್ದು ಈ ಮೂಲಕ ಆತ್ಮರಕ್ಷಣೆಗೆ ಹೆಚ್ಚಿನ ಬಲ ದೊರೆತಂತಾಗಿದೆ ಮತ್ತು ಕೊರಿಯಾ ದ್ವೀಪಸಮುದಾಯಕ್ಕೆ ಹೊರಗಿನಿಂದ ಎದುರಾಗಬಹುದಾದ ಬೆದರಿಕೆಯನ್ನು ಎದುರಿಸಲು ಹಾಗೂ ಶಾಂತಿ ನೆಲೆಸಲು ನೆರವಾಗಲಿದೆ ಎಂದು ದಕ್ಷಿಣ ಕೊರಿಯಾ ಸರಕಾರ ಹೇಳಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಜಗತ್ತಿನ 100 ಪ್ರಭಾವಶಾಲಿ ನಾಯಕರ ಪಟ್ಟಿಯಲ್ಲಿ ಮೋದಿ ಮತ್ತು ದೀದಿ!