ನವದೆಹಲಿ: 1999 ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತದ ವಾಯುಸೇನಾ ಹೆಲಿಕಾಪ್ಟರ್ ನ ಪೈಲಟ್ ಆ ಒಂದು ಕೆಲಸ ಮಾಡಿದ್ದರೆ, ಪಾಕ್ ಪ್ರಧಾನಿ ನವಾಜ್ ಷರೀಫ್ ಮತ್ತು ಅಂದಿನ ಸೇನಾಧಿಕಾರಿ ಜನರಲ್ ಪರ್ವೇಜ್ ಮುಷರಫ್ ಏಕಕಾಲಕ್ಕೆ ಮೃತರಾಗುತ್ತಿದ್ದರು!
ಬಾಂಬ್ ಹೊತ್ತೊಯ್ಯುತ್ತಿದ್ದ ಭಾರತೀಯ ಯುದ್ಧ ವಿಮಾನ ಜಾಗ್ವಾರ್ ನ ಪೈಲಟ್ ಪಾಕಿಸ್ತಾನದ ಗುಲ್ಟೇರಿ ಪ್ರದೇಶದಲ್ಲಿ ಸ್ಥಾಪಿತವಾಗಿದ್ದ ಪಾಕ್ ವಾಯುನೆಲೆಯ ಬಳಿ ತಲುಪಿದ್ದ. ಇನ್ನೇನು ಆ ವಾಯುನೆಲೆ ಮೇಲೆ ಬಾಂಬ್ ಹಾಕುವವನಿದ್ದ. ಆದರೆ ಅಷ್ಟರಲ್ಲಿ ಏರ್ ಕಮಾಂಡರ್ ಬಾಂಬ್ ಹಾಕದಂತೆ ಆದೇಶಿಸಿದ್ದರು.
ಯಾಕೆಂದರೆ ಆ ವಾಯುನೆಲೆಯಲ್ಲಿ ಪಾಕ್ ಪ್ರಧಾನಿ ಷರೀಫ್ ಮತ್ತು ಮುಷರಫ್ ಇರುವ ಮಾಹಿತಿ ವಾಯುಸೇನೆಗೆ ಸಿಕ್ಕಿತ್ತು. ಹೀಗಾಗಿ ಏರ್ ಕಮಾಂಡರ್ ಪ್ರಮಾದವಾಗದಂತೆ ನೋಡಿಕೊಂಡರು. ಆದರೆ ಪೈಲಟ್ ಗೆ ಸೂಚನೆ ಸಿಕ್ಕಿರದೇ ಇರುತ್ತಿದ್ದರೆ, ಆ ವಾಯುಸೇನೆ ಮೇಲೆ ಬಾಂಬ್ ಎಸೆಯುತ್ತಿದ್ದ. ಅಂತೂ ಕೂದಲೆಳೆಯಲ್ಲಿ ಪಾಕಿಸ್ತಾನದ ಇಬ್ಬರೂ ನಾಯಕರೂ ತಪ್ಪಿಸಿಕೊಂಡಿದ್ದರು. ಸರ್ಕಾರಿ ದಾಖಲೆಗಳನ್ನು ಉಲ್ಲೇಖಿಸಿ ಆಂಗ್ಲ ವಾಹಿನಿಯೊಂದು ಮಾಡಿದ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.