ಮುಂಬೈ ಸ್ಫೋಟದ ರೂವಾರಿ ಭೂಗತ ಲೋಕದ ಪಾತಕಿ ದಾವುದ್ ಇಬ್ರಾಹಿಂಗೆ ಸೇರಿದ 15 ಸಾವಿರ ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಯುಎಇ ಸರಕಾರ ವಶಕ್ಕೆ ತೆಗೆದುಕೊಂಡಿದೆ.
ಯುಎಇ ದೇಶದಲ್ಲಿ ದಾವುದ್ ಇಬ್ರಾಹಿಂ ಅನೇಕ ಹೋಟೆಲ್‌ಗಳು, ಬೃಹತ್ ಕಂಪೆನಿಗಳಲ್ಲಿ ಶೇರುಗಳು ಸೇರಿದಂತೆ ಬೃಹತ್ ಪ್ರಮಾಣದ ಆಸ್ತಿಯನ್ನು ಹೊಂದಿದ್ದಾನೆ. ಅಧಿಕಾರಿಗಳು ಆತನ ಇತರ ಆಸ್ತಿಗಳನ್ನು ಕೂಡಾ ಸೀಜ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ದುಬೈಗೆ ಭೇಟಿ ನೀಡಿದ್ದಾಗ ಯುಎಇ ಅಧಿಕಾರಿಗಳಿಗೆ ದಾವುದ್ ಆಸ್ತಿಯ ವಿವರಗಳಿರುವ ಪಟ್ಟಿಯನ್ನು ನೀಡಲಾಗಿತ್ತು. ತದನಂತರ ದುಬೈನಲ್ಲಿ ದಾವೂದ್ ಇಬ್ರಾಹಿಂ ಹೊಂದಿರುವ ಆಸ್ತಿಯ ತನಿಖೆಗೆ ಯುಎಇ ಸರಕಾರ ಆದೇಶ ನೀಡಿತ್ತು.
ಭೂಗತ ಪಾತಕಿ ದಾವುದ್ ಇಬ್ರಾಹಿಂ ಮತ್ತು ಆತನ ಸಹಚರರ ಆಸ್ತಿರಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಭಾರತ ಸರಕಾರ ಯುಎಇ ಸರಕಾರಕ್ಕೆ ಮನವಿ ಮಾಡಿತ್ತು.
ದಾವುದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಗೋಲ್ಡನ್ ಬಾಕ್ಸ್ ಎನ್ನುವ ಕಂಪೆನಿಯನ್ನು ನಡೆಸುತ್ತಿದ್ದಾನೆ ಎನ್ನುವ ಬಗ್ಗೆ ಭಾರತ ಸರಕಾರ ಯುಎಇ ಸರಕಾರಕ್ಕೆ ಮಾಹಿತಿ ನೀಡಿತ್ತು.
ದಾವೂದ್ ಇಬ್ರಾಹಿಂ ದುಬೈ ಹೊರತುಪಡಿಸಿ, ಮೊರೊಕ್ಕೊ, ಸ್ಪೇನ್, ಯುಎಇ, ಸಿಂಗಾಪೂರ್, ಥೈಲೆಂಡ್, ಸೈಪ್ರಸ್, ತುರ್ಕಿ, ಭಾರತ, ಪಾಕಿಸ್ತಾನ ಮತ್ತು ಯುನೈಟೆಡ್ ಕಿಂಗ್ಡಮ್‌ನಲ್ಲಿ ಹೂಡಿಕೆ ಮಾಡಿದ್ದಾನೆ ಎಂದು ಭಾರತ ಸರಕಾರದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.