ಕೀವ್ : ರಷ್ಯಾ ಪಡೆಗಳು ನನ್ನನ್ನು ಹಾಗೂ ನನ್ನ ಕುಟುಂಬವನ್ನು ಸೆರೆ ಹಿಡಿಯಲು ಬಹಳ ಹತ್ತಿರಕ್ಕೆ ಬಂದಿದ್ದವು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಅನುಭವಿಸಿದ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
ಅಲ್ಲಿನ ಶಬ್ಧ ಜೋರಾಗಿತ್ತು. ಭಾರೀ ಸ್ಫೋಟಗಳು ಅಲ್ಲಿ ಸಂಭವಿಸಿದ್ದವು. ನಾನಿದ್ದ ಸ್ಥಳ ಸುರಕ್ಷಿತವಲ್ಲ ಎಂಬುದು ತಕ್ಷಣವೇ ನನಗೆ ಖಾತ್ರಿಯಾಯಿತು. ರಷ್ಯಾ ಪಡೆಗಳು ನನ್ನನ್ನು ಹಾಗೂ ನನ್ನ ಕುಟುಂಬವನ್ನು ಕೊಲ್ಲಲು ಮುಂದಾಗಿವೆ ಎಂದು ನನಗೆ ಮಾಹಿತಿ ದೊರಕಿತು ಎಂದು ಭೀಕರ ಸನ್ನಿವೇಶದ ಬಗ್ಗೆ ತಿಳಿಸಿದರು.
ಅಂತಹ ಸನ್ನಿವೇಶವನ್ನು ನಾನು ಅದಕ್ಕೂ ಮೊದಲು ಕೇವಲ ಸಿನಿಮಾಗಳಲ್ಲಿ ಮಾತ್ರವೇ ನೋಡಿದ್ದೆ. ತಕ್ಷಣ ನಮ್ಮ ಭದ್ರತಾ ಸಿಬ್ಬಂದಿ ನಮ್ಮ ಆವರಣವನ್ನು ಭದ್ರಪಡಿಸಲು ಯತ್ನಿಸಿದರು ಎಂದು ವಿವರಿಸಿದರು.
ಹಿಂದಿನ ಪ್ರವೇಶದ್ವಾರದಲ್ಲಿ ಒಂದು ಗೇಟ್ ಅನ್ನು ಪೋಲಿಸ್ ಬ್ಯಾರಿಕೇಡ್ಗಳು ಹಾಗೂ ಪ್ಲೈವುಡ್ ಬೋರ್ಡ್ಗಳ ರಾಶಿಯಿಂದ ಮುಚ್ಚಲಾಗಿತ್ತು. ದಾಳಿಯ ಹಿಂದಿನ ರಾತ್ರಿ ದೀಪಗಳನ್ನು ಆರಿಸಲಾಗಿತ್ತು. ನಮ್ಮ ಕಾವಲುಗಾರರಿಗೆ ಹಾಗೂ ಎಲ್ಲಾ ಸಹಾಯಕರಿಗೂ ಬುಲೆಟ್ ಪ್ರೂಫ್ ಜಾಕೆಟ್ ಹಾಗೂ ರೈಫಲ್ಗಳನ್ನು ತರಿಸಲಾಗಿತ್ತು ಎಂದರು.