ಭಾರತ ಮತ್ತು ಪಾಕಿಸ್ತಾನ ಕೂಡಾ ಭಯೋತ್ಪಾದನೆಗೆ ಬಲಿಪಶುವಾದ ರಾಷ್ಟ್ರಗಳು. ಪಾಕಿಸ್ತಾನ ಕೂಡಾ ಉಗ್ರರನ್ನು ನಿರ್ಮೂಲನೆಗೊಳಿಸಲು ಪ್ರಯತ್ನಿಸುತ್ತಿದೆ. ಅಂತಾರಾಷ್ಟ್ರೀಯ ಸಮುದಾಯ ಪಾಕಿಸ್ತಾನದ ಸಂಕಷ್ಟವನ್ನು ಪರಿಗಣಿಸಬೇಕಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ನೀಡಿದ ಹೇಳಿಕೆಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್‌ಯಿಂಗ್, ಯಾವುದೇ ದೇಶವನ್ನು ಭಯೋತ್ಪಾದನೆಗೆ ಹೋಲಿಸುವುದನ್ನು ಚೀನಾ ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಭಯೋತ್ಪಾದನೆಯ ಮಾತೃ ಸ್ವರೂಪಿ ಎಂದು ಪ್ರಧಾನಿ ಮೋದಿ ಜರಿದ ಮಾರನೇ ದಿನವೇ ಚೀನಾ, ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎನ್ನುವುದು ಸರಿಯಲ್ಲ. ಪಾಕಿಸ್ತಾನ ತೋರಿದ ತ್ಯಾಗಗಳನ್ನು ವಿಶ್ವ ಪರಿಗಣಿಸಬೇಕು ಎಂದು ಬೊಗಳೆ ಬಿಟ್ಟಿದೆ.
ಯಾವುದೇ ರೀತಿಯ ಭಯೋತ್ಪಾದನೆಯನ್ನು ನಾವು ವಿರೋಧಿಸುತ್ತೇವೆ. ಪ್ರತಿಯೊಂದು ದೇಶ ಸುರಕ್ಷಿತವಾಗಿದೆ ಎನ್ನುವ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಯತ್ನ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ದೀರ್ಘಾವಧಿಯಿಂದಲೂ ಚೀನಾ ಭಯೋತ್ಪಾದನೆಯನ್ನು ವಿರೋಧಿಸುತ್ತಾ ಬಂದಿದೆ. ಚೀನಾ ಮತ್ತು ಪಾಕಿಸ್ತಾನ ಆತ್ಮಿಯ ಮಿತ್ರರು ಎಂದು ಬಣ್ಣಿಸಿದೆ.