ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು 100ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದು, ಈ ಹಿನ್ನೆಲೆ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗುವ ವೇಳೆಯೂ ತಮ್ಮನ್ನು ಯಾರಾದರೂ ಕೊಲ್ಲಬಹುದು ಎಂದು ಹೇಳಿಕೊಂಡಿದ್ದಾರೆ.
ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯನ್ನು ನಡೆಸಲು ಅವಕಾಶ ನೀಡುವಂತೆ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ. ಪಾಕಿಸ್ತಾನ ತೆಹ್ರಿಕ್-ಇ-ಇನ್ಸಾಫ್ ಅಧ್ಯಕ್ಷ ತೋಷಾಖಾನ ಪ್ರಕರಣದಲ್ಲಿ ಶನಿವಾರ ವಿಚಾರಣೆಗಾಗಿ ಫೆಡರಲ್ ನ್ಯಾಯಾಂಗ ಸಂಕೀರ್ಣಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿ ತಮ್ಮನ್ನು ಕೊಲ್ಲಲು ದೊಡ್ಡ ಸಂಚು ರೂಪಿಸಲಾಗಿತ್ತು ಎಂದು ಸೋಮವಾರ ಆರೋಪಿಸಿದ್ದಾರೆ.
ಎಫ್ಜೆಸಿ ಹೊರಗಡೆ ತನ್ನನ್ನು ಕೊಲ್ಲಲು ಸುಮಾರು 20 ಜನ ಅಪರಿಚಿತ ವ್ಯಕ್ತಿಗಳು ಕಾದು ಕುಳಿತಿದ್ದರು ಎಂದು ಇಮ್ರಾನ್ ಖಾನ್ ತಿಳಿಸಿದ್ದು, ಈ ಬಗ್ಗೆ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಉಮರ್ ಅಟ್ಟಾ ಬಂಡಿಯಲ್ ಅವರಿಗೆ ಪತ್ರ ಬರೆದಿದ್ದಾರೆ. ವರ್ಚುವಲ್ ಆಗಿ ವಿಚಾರಣೆ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗೂ ತಮ್ಮ ಮೇಲೆ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಒಟ್ಟುಗೂಡಿಸುವಂತೆ ಕೋರಿಕೊಂಡಿದ್ದಾರೆ.