ಇಸ್ಲಾಮಾಬಾದ್(ಆ.04): ಭಾರತದ ವಿರುದ್ಧ ಕತ್ತಿ ಮಸೆಯಲು, ಉಗ್ರರ ಪೋಷಣೆ ಜೊತೆಗೆ ಕೊರೋನಾ ಹೊಡೆತದಿಂದ ಪಾಕಿಸ್ತಾನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ, ಹಣಕಾಸು ವ್ಯವಸ್ಥೆ ಸರಿದೂಗಿಸಲು ತನ್ನಲ್ಲೇ ಶಕ್ತಿ ಬಳಸಿಕೊಳ್ಳುತ್ತಿದೆ. ಇದೀಗ ಖಾಲಿಯಾಗಿರುವ ಖಜಾನೆಗೆ ಒಂದಷ್ಟು ಹಣ ಹೊಂದಿಸಲು ಪ್ರಧಾನಿ ಅಧೀಕೃತ ನಿವಾಸವನ್ನೇ ಬಾಡಿಗೆಗೆ ಇಡಲಾಗಿದೆ.
ಪಾಕಿಸ್ತಾನ ಪ್ರಧಾನಿ ಕಾರ್ಯಾಲಯ ಹೊಸದಾಗಿ ಹೊರಡಿಸಿರುವ ಪ್ರಕಟಣೆಯಲ್ಲಿ ನಿವಾಸ ಬಾಡಿಗೆಗೆ ನೀಡುವುದಾಗಿ ಹೇಳಿದೆ. ಆರ್ಥಿಕ ಸಂಕಷ್ಟ ಸರಿದೂಗಿಸಲು ಪಾಕಿಸ್ತಾನ ಸರ್ಕಾರ ಈ ರೀತಿ ತಂತ್ರಕ್ಕೆ ಇಳಿದಿರುವುದು ಇದೇ ಮೊದಲಲ್ಲ. ಕತ್ತೆ ವ್ಯಾಪಾರ ಸೇರಿದಂತೆ ಹಲವು ಮೂಲಗಳಿಂದ ಹಣ ಹೊಂದಿಸುವ ಕಾರ್ಯಕ್ಕೆ ಕೈಹಾಕಿದೆ. ಇದೀಗ ಬಾಡಿಗೆ ಮೂಲಕ ಹಣ ಪಡೆಯಲು ಮುಂದಾಗಿದೆ.
ಪಾಕ್ ಪ್ರಧಾನಿ ಅಧೀಕೃತ ನಿವಾಸದಿಂದ ಆದಾಯ ಪ್ಲಾನ್ ಮಾಡಿರುವುದು ಹೊಸದಲ್ಲ. ಪ್ರಧಾನಿ ಇಮ್ರಾನ್ ಖಾನ್ ತಮ್ಮ ಅಧೀಕೃತ ನಿವಾಸದ ವಾರ್ಷಿಕ 470 ಮಿಲಿಯನ್ ನಿರ್ವಹಣೆ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎಂದು 2018ರಲ್ಲಿ ನಿವಾಸ ತೊರೆದಿದ್ದರು. ಈ ವೇಳೆ ಪಾಕಿಸ್ತಾನ ಸರ್ಕಾರ ಮಹತ್ವದ ಘೋಷಣೆಯೊಂದನ್ನು ಮಾಡಿತ್ತು.
ಪ್ರಧಾನಿ ಅಧೀಕೃತ ನಿವಾಸವನ್ನು ಸ್ನಾತಕೋತ್ತರ ಸಂಸ್ಥೆಯನ್ನಾಗಿ ಪರಿವರ್ತಿಸುವುದಾಗಿ ಶಿಕ್ಷಣ ಸಚಿವ ಶಫ್ಖಾತ್ ಮೆಹಮ್ಮೂದ್ ಹೇಳಿದ್ದರು. ಪ್ರಧಾನಿ ನಿವಾಸ ಮಾತ್ರವಲ್ಲ, ಗರ್ವನರ್ ಕೂಡ ಅಧೀಕೃತ ನಿವಾಸ ತೊರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.
ಪ್ರಧಾನಿ ನಿವಾಸವನ್ನು ವಿದ್ಯಾಸಂಸ್ಥೆಯನ್ನಾಗಿ ಪರಿವರ್ತಿಸಲು ಪಾಕಿಸ್ತಾನ ಸರ್ಕಾರ ಹಣದ ಕೊರತೆ ಎದುರಿಸಿತು. ಹೀಗಾಗಿ 2019ರಲ್ಲಿ ಈ ನಿವಾಸವನ್ನು ಮದುವೆ ಸೇರಿದಂತೆ ಸಮಾರಂಭಗಳ ಹಾಲ್ ಆಗಿ ಪರಿವರ್ತಿಸಲಾಯಿತು. 2019ರಲ್ಲಿ ಪಾಕಿಸ್ತಾನ ಸೇನಾ ಬ್ರಿಗೇಡಿಯರ್ ವಾಸೀಮ್ ಪುತ್ರಿ ಮದುವೆ ಸೇರಿದಂತೆ ಹಲವು ರಾಜಕೀಯ ನಾಯಕರ ಮದುವೆಗೆ ಪಾಕಿಸ್ತಾನಿ ಪ್ರಧಾನಿ ನಿವಾಸ ಸಾಕ್ಷಿಯಾಗಿತ್ತು.
2019ರಲ್ಲಿ ಪ್ರಧಾನಿ ನಿವಾಸ ಒಂದಷ್ಟು ಆದಾಯ ತಂದಿದ್ದು ಸುಳ್ಳಲ್ಲ. ಆದರೆ 2020ರಲ್ಲಿ ಕೊರೋನಾ ವಕ್ಕರಿಸಿತು. ಪರಿಣಾಮ ಮದುವೆ ಸಮಾರಂಭಗಳೆಲ್ಲಾ ನಿಂತು ಹೋಯಿತು. ಇತ್ತ ಪ್ರಧಾನಿ ನಿವಾಸದಿಂದ ಬರುತ್ತಿದ್ದ ಆದಾಯವೂ ನಿಂತು ಹೋಯಿತು. ಕಳೆದೊಂದು ವರ್ಷದಿಂದ ಪ್ರಧಾನಿ ನಿವಾಸದಲ್ಲಿ ಯಾವ ಸಮಾರಂಭ ನಡೆದಿಲ್ಲ.
ಬರುತ್ತಿದ್ದ ಆದಾಯಕ್ಕೆ ಕತ್ತರಿ ಬಿದ್ದ ಕಾರಣ ಇದೀಗ ಪ್ರಧಾನಿ ನಿವಾಸವನ್ನು ಬಾಡಿಗೆಗೆ ನೀಡಲು ಪ್ರಧಾನಿ ಇಮ್ರಾನ್ ಖಾನ್ ನಿರ್ಧರಿಸಿದ್ದಾರೆ. ಈಗಾಗಲೇ ಬಾಡಿಗೆಗೆ ಪ್ರಕಟಣೆ ಹೊರಡಿಸಲಾಗಿದೆ. ಕೊರೋನಾ ಸಂಕಷ್ಟದಲ್ಲಿ ದುಬಾರಿ ಮೊತ್ತಕ್ಕೆ ಯಾರು ಬಾಡಿಗೆ ಪಡೆಯುತ್ತಾರೆ ಅನ್ನೋ ಪ್ರಶ್ನೆಯೂ ಇದೀಗ ಎದುರಾಗಿದೆ