ಇಸ್ಲಾಮಾಬಾದ್ : ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 11 ವರ್ಷದ ಹಿಂದೂ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕ್ರೂರವಾಗಿ ಕೊಲೆ ಮಾಡಿದ ಧಾರುಣ ಘಟನೆ ನಡೆದಿದೆ.
ಈ ಬಾಲಕ ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದ. ಆತನಿಗಾಗಿ ಮನೆಯವರು ಸಾಕಷ್ಟು ಹುಡುಕಾಟ ನಡೆಸಿದ್ದರು. ಶನಿವಾರ ಸಿಂಧ್ ಪ್ರಾಂತ್ಯದ ಖಾಯಿರ್ಪುರ ಮಿರ್ ಪ್ರದೇಶದಲ್ಲಿನ ಜನವಸತಿ ಇಲ್ಲದ ಮನೆಯೊಂದರಲ್ಲಿ ಆತನ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.
'ಇಡೀ ಕುಟುಂಬವು ಗುರು ನಾನಕ್ ಜನ್ಮಜಯಂತಿ ಕಾರ್ಯಕ್ರಮದ ಸಿದ್ಧತೆಯಲ್ಲಿ ಮಗ್ನವಾಗಿತ್ತು. ಹೀಗಾಗಿ ಮಗು ನಾಪತ್ತೆಯಾಗಿರುವುದು ನಮ್ಮ ಯಾರ ಗಮನಕ್ಕೂ ಬಂದಿರಲಿಲ್ಲ. ಆ ಮನೆಯಲ್ಲಿ ರಾತ್ರಿ 11 ಗಂಟೆ ವೇಳೆಗೆ ಅವರ ಶವ ಸಿಕ್ಕಿದೆ' ಎಂದು ಬಾಲಕನ ಸಂಬಂಧಿ ರಾಜ್ ಕುಮಾರ್ ತಿಳಿಸಿದ್ದಾರೆ. 2011ರಲ್ಲಿ ಜನಿಸಿದ್ದ ಆತ, ಐದನೇ ತರಗತಿ ಓದುತ್ತಿದ್ದ. ಈ ಭಯಾನಕ ಘಟನೆಯ ಬಳಿಕ ಇಡೀ ಪ್ರದೇಶದಲ್ಲಿ ಭೀತಿ ವ್ಯಾಪಿಸಿದೆ ಎಂದು ಅವರು ಹೇಳಿದ್ದಾರೆ.
ಬಾಲಕನನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ. ಅದಕ್ಕೂ ಮುನ್ನ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ ತಿಳಿಸಿದ್ದಾರೆ. ಇಬ್ಬರನ್ನು ಬಂಧಿಸಲಾಗಿದೆ. ಅದರಲ್ಲಿ ಒಬ್ಬ ಆರೋಪಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಬಾಲಕನ ದೇಹದಲ್ಲಿ ಚಿತ್ರಹಿಂಸೆಯ ಗುರುತುಗಳು ಕೂಡ ಇವೆ. ಈ ಪ್ರಾಂತ್ಯದಲ್ಲಿ ಕಳೆದ ಕೆಲವು ವಾರಗಳಲ್ಲಿಯೇ ಇದು ಇಂತಹ ಎರಡನೇ ಪ್ರಕರಣವಾಗಿದೆ ಎಂದು ಮಕ್ಕಳ ರಕ್ಷಣಾ ಪ್ರಾಧಿಕಾರದ ಜುಬೈರ್ ಮಹರ್ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಹಿಂದೂ ಸಮುದಾಯದ ಬಾಲಕಿಯೊಬ್ಬಳು ಸುಕ್ಕೂರ್ ಜಿಲ್ಲೆಯ ಸಲೇಹ್ ಪಾತ್ ಪ್ರಾಂತ್ಯದಿಂದ ನಾಪತ್ತೆಯಾಗಿದ್ದಳು. ಆಕೆಯ ಪತ್ತೆಗೆ 25 ಲಕ್ಷ ರೂ ಬಹುಮಾನವನ್ನು ಪೊಲೀಸರು ಘೋಷಿಸಿದ್ದರು. ಆದರೆ ಅದು ಫಲ ನೀಡಿರಲಿಲ್ಲ ಎಂದು ಮಹರ್ ತಿಳಿಸಿದ್ದಾರೆ.