ನವದೆಹಲಿ: ಆಹಾರ ವ್ಯರ್ಥ ಮಾಡಬಾರದು ಎಂದು ಎಷ್ಟೇ ಜಾಗೃತಿ ಮೂಡಿಸಿದರೂ, ಹೋಟೆಲ್ ಗಳಲ್ಲಿ, ಮನೆಗಳಲ್ಲಿ ಸಮಾರಂಭಗಳಲ್ಲಿ ಆಹಾರ ವ್ಯರ್ಥ ಮಾಡುವ ಅಭ್ಯಾಸವನ್ನಂತೂ ನಾವು ಬಿಡಲ್ಲ. ಹಾಗಿದ್ದರೆ ಒಂದು ವರ್ಷಕ್ಕೆ ಒಂದು ಕುಟುಂಬ ವ್ಯರ್ಥ ಮಾಡುವ ಆಹಾರವೆಷ್ಟು ಗೊತ್ತಾ?
ವಿಶ್ವಸಂಸ್ಥೆಯ ಆಹಾರ ಪೋಲು ಸಮೀಕ್ಷೆಯ ಪ್ರಕಾರ, ಭಾರತೀಯ ಕುಟುಂಬವೊಂದು ವರ್ಷವೊಂದಕ್ಕೆ 50 ಕೆ.ಜಿ.ಯಷ್ಟು ಆಹಾರ ಪೋಲು ಮಾಡುತ್ತದಂತೆ! ಒಟ್ಟಾರೆ ವಿಶ್ವದಾದ್ಯಂತ 931 ಮಿಲಿಯನ್ ಮೆಟ್ರಿಕ್ ಟನ್ ನಷ್ಟು ಆಹಾರವನ್ನು ಪೋಲು ಮಾಡುತ್ತೇವೆ.
ಅದರಲ್ಲೂ ಮುಖ್ಯವಾಗಿ ಮನೆಗಳಲ್ಲಿಯೇ ಆಹಾರ ವ್ಯರ್ಥವಾಗುವುದು ಹೆಚ್ಚು. ಶೇ. 61 ರಷ್ಟು ಆಹಾರ ಪ್ರತೀ ವರ್ಷ ಕಸದ ಬುಟ್ಟಿ ಸೇರುತ್ತದೆ. ವಿಶೇಷವೆಂದರೆ ಭಾರತಕ್ಕಿಂತ ಹೆಚ್ಚು ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಆಹಾರ ವ್ಯರ್ಥವಾಗುತ್ತಿದೆ. ಬಾಂಗ್ಲಾದೇಶದಲ್ಲಿ ಪ್ರತೀ ವರ್ಷ 65 ಕಿ.ಗ್ರಾಂ, ಪಾಕಿಸ್ತಾನದಲ್ಲಿ 74 ಕಿ.ಗ್ರಾಂ, ಶ್ರೀಲಂಕಾದಲ್ಲಿ 76 ಕಿ.ಗ್ರಾಂ, ನೇಪಾಳದಲ್ಲಿ 79 ಕಿ.ಗ್ರಾಂ, ಅಫ್ಘಾನಿಸ್ತಾನದಲ್ಲಿ 82 ಕಿ.ಗ್ರಾಂನಷ್ಟು ಆಹಾರ ವ್ಯರ್ಥವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.