ಜಾಗತಿಕ ಉಗ್ರಗಾಮಿ ಸಂಘಟನೆಯಾದ ಲಷ್ಕರ್-ಎ-ತೊಯಿಬಾ ಮತ್ತು ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಪಾಕಿಸ್ತಾನದ ವಾಣಿಜ್ಯ ಖಾತೆ ಸಚಿವ ಖುರ್ರಂ ದಸ್ತಗೀರ್ ಹೇಳಿದ್ದಾರೆ.
ಮುಂಬೈ ಉಗ್ರರ ದಾಳಿಯ ಮಾಸ್ಟರ್‌ಮೈಂಡ್ ಸಯೀದ್ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದರೂ ಯಾವ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗುವುದು ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ ಎನ್ನಲಾಗಿದೆ.
ಸದ್ಯಕ್ಕೆ ಹಫೀಜ್ ಸಯೀದ್‌ನನ್ನು ಗೃಹಬಂಧನದಲ್ಲಿರಿಸಲಾಗಿದೆ. ಸಂಪೂರ್ಣ ತನಿಖೆಯ ನಂತರ ಸಯೀದ್ ವಿರುದ್ಧ ದೂರು ದಾಖಲಿಸಲಾಗುವುದು. ಯಾವ ಪ್ರಕರಣದಲ್ಲಿ ದಾಖಲಿಸಲಾಗುವುದು ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವೇ ದಿನಗಳಲ್ಲಿ ಬಹಿರಂಗವಾಗಲಿದೆ ಎಂದು ತಿಳಿಸಿದ್ದಾರೆ.
ಪಂಜಾಬ್ ಪ್ರಾಂತ್ಯದ ಕಾನೂನು ಸಚಿವ ರಾಣಾ ಸನಾವುಲ್ಲಾ ಮಾತನಾಡಿ, ಮುಂಬರುವ ದಿನಗಳಲ್ಲಿ ಜಮಾತ್ ಉದ್ ದಾವಾ ಮತ್ತು ಫಲಾಹ್-ಎ-ಇನ್‌ಸಾನತ್ ಕಾರ್ಯಕರ್ತರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ನವಾಜ್ ಷರೀಫ್ ಸರಕಾರದ ಕಾಶ್ಮಿರ ನೀತಿ ಮತ್ತು ಜೆಯುಡಿ ಮುಖ್ಯಸ್ಥ ಸಯೀದ್ ನೀತಿ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಸಚಿವ ರಾಣಾ ಸನಾವುಲ್ಲಾ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.