ಆರ್ಥಿಕ ಬಿಕ್ಕಟ್ಟಿನಿಂದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಆಹಾರಕ್ಕಾಗಿ ಜನರು ಒದ್ದಾಡುವಂತಹ ಪರಿಸ್ಥಿತಿ ಎದುರಾಗಿದೆ. ತುತ್ತಿನ ಚೀಲ ತುಂಬಿಸಲು ಆಹಾರ ಪದಾರ್ಥಕ್ಕಾಗಿ ಜನ ಪರದಾಡುವಂತಹ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನಕಲಕುವಂತಿದೆ. ಗೋಧಿ ಹಿಟ್ಟಿನ ಮೂಟೆಗಾಗಿ ಟ್ರಕ್ ಹಿಂದೆ ಜನ ಓಡುತ್ತಿರುವುದು, ಮನೆಯಲ್ಲಿ ಆಹಾರವಿಲ್ಲದೇ ಖಾಲಿ ಡಬ್ಬಿಗಳನ್ನು ತೋರಿಸಿ ಗೋಳಾಡುತ್ತಿರುವುದು, ಆಹಾರ ಪದಾರ್ಥ ವಿತರಣೆ ವೇಳೆ ಕಾಲ್ತುಳಿತ, ಆಹಾರಕ್ಕಾಗಿ ಹೊಡೆದಾಟ.. ಮೊದಲಾದ ದೃಶ್ಯಗಳು ದೇಶದಲ್ಲಿ ತಲೆದೋರಿರುವ ಆಹಾರ ಬಿಕ್ಕಟ್ಟನ್ನು ಪ್ರತಿಬಿಂಬಿಸುವಂತಿವೆ. ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು, ಹಣದುಬ್ಬರ ಉಂಟಾಗಿದೆ. ಪರಿಣಾಮವಾಗಿ ಆಹಾರ ಪದಾರ್ಥಗಳ ಬೆಲೆಯೂ ಗಗನಕ್ಕೇರಿದೆ. ಶ್ರೀಲಂಕಾ ಅನುಭವಿಸಿದ ಸಂಕಷ್ಟದ ಪರಿಸ್ಥಿತಿಯೇ ಪಾಕಿಸ್ತಾನಕ್ಕೂ ಎದುರಾಗಿದೆ. ವಿದೇಶಗಳಿಂದ ವಸ್ತು, ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಡಾಲರ್ ಕೊರತೆಯೂ ದೇಶದಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡಿದೆ. ಆಹಾರ ಬಿಕ್ಕಟ್ಟು ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸರ್ಕಾರದ ವಿರುದ್ಧ ಜನ ಧಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ.