ವಾಷಿಂಗ್ಟನ್ : ವಿಶ್ವದ ಶ್ರೀಮಂತ ಎಲೋನ್ ಮಸ್ಕ್ ಟ್ವಿಟ್ಟರ್ ಖರೀದಿ ಬಳಿಕ ಇದೀಗ ಹೊಸ ಬದಲಾವಣೆಯ ಸೂಚನೆ ನೀಡಿದ್ದಾರೆ.
ವಾಣಿಜ್ಯ ಹಾಗೂ ಸರ್ಕಾರಿ ಬಳಕೆಗೆ ಟ್ವಿಟ್ಟರ್ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ಮೈಕ್ರೋಬ್ಲಾಗಿಂಗ್ ಸೈಟ್ನಲ್ಲಿ ತಿಳಿಸಿದ್ದಾರೆ.
ಸಾಮಾನ್ಯ ಬಳಕೆದಾರರಿಗೆ ಟ್ವಿಟ್ಟರ್ ಸಂಪೂರ್ಣ ಉಚಿತವಾಗಿದೆ. ಆದರೆ ಇನ್ನು ಮುಂದೆ ವಾಣಿಜ್ಯ ಹಾಗೂ ಸರ್ಕಾರಿ ಬಳಕೆದಾರರಿಗೆ ಶುಲ್ಕವನ್ನು ವಿಧಿಸಬಹುದು ಎಂದು ಟ್ವಿಟ್ಟರ್ನಲ್ಲಿ ಬರೆದಿದ್ದಾರೆ. ಈ ಮೂಲಕ ಟೆಸ್ಲಾ ಮುಖ್ಯಸ್ಥ ಟ್ವಿಟ್ಟರ್ ಖರೀದಿಯ ಬಳಿಕ ಹೊಸದೊಂದು ಬದಲಾವಣೆ ಬಗ್ಗೆ ಸುಳಿವು ನೀಡಿದ್ದಾರೆ.
ಕಳೆದ ತಿಂಗಳ ಪ್ರಾರಂಭದಲ್ಲಿ ಮಸ್ಕ್ ಟ್ವಿಟ್ಟರ್ನ ಶೇ.9.2 ರಷ್ಟು ಪಾಲನ್ನು ಖರೀದಿಸಿ, ಜೊತೆ ಜೊತೆಗೆ ಹೊಸ ಎಡಿಟ್ ಬಟನ್ ಫೀಚರ್ ಅನ್ನು ತರುವ ಬಗ್ಗೆಯೂ ತಿಳಿಸಿದ್ದರು. ಇದಾದ ಬೆನ್ನಲೇ ಅವರು ಟ್ವಿಟ್ಟರ್ ಮಂಡಳಿಯ ಭಾಗವಲ್ಲ ಎಂಬುದಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಾಗ್ ಅಗರ್ವಾಲ್ ತಿಳಿಸಿದ್ದರು.