ಕುನ್ಮಿಂಗ್ : ಇದು ಬದುಕಿನ ಅಳಿವು ಉಳಿವಿನ ಪ್ರಶ್ನೆ ಬಂದಾಗಲೂ ಸಾಧ್ಯ. ದೃಢನಿಶ್ಚಯ ಮತ್ತು ಬದ್ಧತೆ ಇದ್ದರೆ ಯಾವುದನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಈ ಮನಕಲಕುವ ಘಟನೆ ಸಾಬೀತುಪಡಿಸಿದೆ.
ಅಪರೂಪದ ಹಾಗೂ ಅಪಾಯಕಾರಿ ಕಾಯಿಲೆಯಿಂದ ಸಾವಿನಂಚಿನಲ್ಲಿದ್ದ ಎರಡು ವರ್ಷದ ತನ್ನ ಮಗುವನ್ನು ರಕ್ಷಿಸಲು ತಂದೆಯೇ ಸಂಶೋಧಕನಾದ ಕಥೆಯಿದು. ಅಂದಹಾಗೆ, ಇದು ನಡೆದಿರುವುದು ಚೀನಾದಲ್ಲಿ. ಚೀನಾದ ಯುನ್ನಾನ್ ಪ್ರಾಂತ್ಯದ ಕುನ್ಮಿಂಗ್ನಲ್ಲಿ ವಾಸಿಸುತ್ತಿರುವ ಕ್ಸು ವೀ ಅವರ ಎರಡು ವರ್ಷದ ಮಗು ಹಾಯೊಯಂಗ್ ಹೆಚ್ಚೆಂದರೆ ಕೆಲವು ತಿಂಗಳು ಬದುಕುವ ಸ್ಥಿತಿಯಲ್ಲಿತ್ತು. ಅಪರೂಪದ ಆನುವಂಶಿಕ ಆರೋಗ್ಯ ಸಮಸ್ಯೆಯಿಂದ ಹೊರಬರಲು ಇದ್ದ ಏಕೈಕ ಔಷಧ ಚೀನಾದ ಯಾವುದೇ ಮೂಲೆಯಲ್ಲಿ ಲಭ್ಯವಿರಲಿಲ್ಲ. ಹೇಳಿ ಕೇಳಿ ಅದು ಕೊರೊನಾ ವೈರಸ್ ಸಾಂಕ್ರಾಮಿಕ ಉತ್ತುಂಗದಲ್ಲಿದ್ದ ಸಮಯ. ಚೀನಾ ಸೇರಿದಂತೆ ಬಹುತೇಕ ದೇಶಗಳ ಗಡಿಗಳು ವಿದೇಶಿಗರಿಗೆ ಮುಚ್ಚಿದ್ದವು. ಹೀಗಾಗಿ ಚಿಕಿತ್ಸೆಗಾಗಿ ಪರದೇಶಕ್ಕೆ ತೆರಳಲಾಗದ ಸ್ಥಿತಿ ಇತ್ತು.