ವಾಷಿಂಗ್ಟನ್ : ವಿಶ್ವದ ಶ್ರೀಮಂತ ಎಲೋನ್ ಮಸ್ಕ್ ಬುಧವಾರ ಹೊಸ ಕೃತಕ ಬುದ್ಧಿಮತ್ತೆಯ ಸ್ಟಾರ್ಟ್ ಅಪ್ ಎಕ್ಸ್ಎಐ ಅನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಎಐ ಲೋಕದಲ್ಲಿ ಭಾರೀ ಸದ್ದು ಮಾಡಿದ್ದ ಓಪನ್ ಎಐನ ಚಾಟ್ ಜಿಪಿಟಿಗೆ ಸೆಡ್ಡು ಹೊಡೆಯಲು ಇದೀಗ ಮಸ್ಕ್ ಮುಂದಾಗಿದ್ದಾರೆ.
ಈಗಾಗಲೇ ಎಲೆಕ್ಟ್ರಿಕ್ ಕಾರು ತರಾರಿಕಾ ಕಂಪನಿ ಟೆಸ್ಲಾ, ರಾಕೆಟ್ ಉಡಾವಣಾ ಕಂಪನಿ ಸ್ಪೇಸ್ಎಕ್ಸ್ನ ಸಿಇಒ ಮಾತ್ರವಲ್ಲದೇ ಟ್ವಿಟ್ಟರ್ನ ಮಾಲೀಕನಾಗಿರುವ ಮಸ್ಕ್ ಈಗ ಎಐ ಲೋಕದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ.
ಈ ಹಿಂದೆ ಮಸ್ಕ್ ಎಐ ಅಭಿವೃದ್ಧಿಯನ್ನು ನಿಲ್ಲಿಸಬೇಕು. ಇದರಿಂದ ದೊಡ್ಡ ಅಪಾಯದ ಸಾಧ್ಯತೆಯಿದೆ. ಈ ವಲಯದಲ್ಲಿ ನಿಯಂತ್ರಣದ ಅಗತ್ಯವಿದೆ. ಇದು ನಾಗರಿಕತೆಯ ವಿನಾಶಕ್ಕೆ ಕಾರಣವಾಗಬಹುದು ಎಂದು ಪದೇ ಪದೇ ಕಳವಳ ವ್ಯಕ್ತಪಡಿಸಿದ್ದರು.
ಇದೀಗ ತನ್ನದೇ ಎಐ ಕಂಪನಿಯನ್ನು ಪ್ರಾರಂಭ ಮಾಡಿ ಮಾಹಿತಿಯನ್ನು ಹಂಚಿಕೊಂಡಿರುವ ಮಸ್ಕ್, ಸುರಕ್ಷಿತ ಎಐ ಅನ್ನು ನಿರ್ಮಿಸುವ ತನ್ನ ಯೋಜನೆಯನ್ನು ವಿವರಿಸಿದ್ದಾರೆ. ಎಐಗೆ ನೈತಿಕತೆಯನ್ನು ಸ್ಪಷ್ಟವಾಗಿ ಪ್ರೋಗ್ರಾಮಿಂಗ್ ಮಡುವ ಬದಲು ಅವರು ಎಕ್ಸ್ಎಐಯಲ್ಲಿ ಹೆಚ್ಚಿನ ಕುತೂಹಲಕಾರಿ ಅಂಶವನ್ನು ರಚಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.