ಜೂಜಾಟದಲ್ಲಿ ಪಾಂಡವರು ಪತ್ನಿ ದ್ರೌಪದಿಯನ್ನೆ ಇಟ್ಟು ಸೋತಿದ್ದರು ಎಂಬುದನ್ನ ಕೇಳಿದ್ಧೇವೆ. ಇದೀಗ, ಕಲಿಯುಗದಲ್ಲೂ ಒಬ್ಬ ರಾಜಕುಮಾರ ಜೂಜಿನಲ್ಲಿ ಐವರು ಪತ್ನಿಯರನ್ನ ಸೋತಿದ್ದಾನೆ.
ಡ್ರಗ್ಸ್ ಮತ್ತು ಜೂಜಿನ ಮೂಲಕವೇ ವಿಶ್ವಾದ್ಯಂತ ಕುಖ್ಯಾತಿಯಾಗಿರುವ ದುಬೈ ಯುವರಾಜ ಮಜೇದ್ ಬಿನ್ ಅಬ್ದುಲ್ಲಾ ಕ್ಯಾಸಿನೊದಲ್ಲಿ 6 ಗಂಟೆಗಳ ಕಾಲ ಅನಿಯಮಿತ ಪೋಕರ್ ಗೇಮ್ ಆಡುವ ಮೂಲಕ 359 ಮಿಲಿಯನ್ ಡಾಲರ್(2000 ಕೋಟಿ ರೂ.) ಹಣ ಮತ್ತು ತಾನು ಜೂಜಿನಲ್ಲಿ ಮಾಡಿದ್ದ ಸಾಲಕ್ಕಾಗಿ 9 ಹೆಂಡತಿಯರ ಪೈಕಿ ಐವರನ್ನ ಕಳೆದುಕೊಂಡಿದ್ದಾನೆಂದು ವರದಿಯಾಗಿದೆ.
ಸೈನಲ್ ಕ್ಯಾಸಿನೋದಲ್ಲಿ ಒಂದು ವಾರ ಕಾಲ ಜೂಜಾಡುತ್ತಾ ಕಳೆದ ರಾಜಕುಮಾರ ಅಪಾರ ಪ್ರಮಾಣದ ಹಣ ಕಳೆದುಕೊಂಡಿದ್ದಾನೆ. ಅಷ್ಟೇ ಅಲ್ಲ, ಒತ್ತಾಯಪೂರ್ವಕವಾಗಿ ಐವರು ಪತ್ನಿಯರನ್ನೂ ಕಳೆದುಕೊಂಡಿದ್ದಾನೆ. 25 ಮಿಲಿಯನ್ ಡಾಲರ್ ಹಣಕ್ಕೆ ಪ್ರತಿಯಾಗಿ ರಾಜಕುಮಾರ ತನ್ನ ಐವರು ಪತ್ನಿಯರನ್ನೇ ಜೂಜಿನಲ್ಲಿಟ್ಟಿದ್ದ ಎಂದು ಕ್ಯಾಸಿನೋ ಮ್ಯಾನೇಜರ್ ಬಹಿರಂಗಪಡಿಸಿರುವುದಾಗಿ ವರದಿಯಾಗಿದೆ.
ಈ ಹಿಂದೆ ಕ್ಯಾಸಿನೋದಲ್ಲಿ ಕುದುರೆ ಮತ್ತು ಒಂಟೆಗಳನ್ನ ಆಡಿದ ಉದಾಹರಣೆಗಳಿವೆ. ಇದೇ ಮೊದಲ ಬಾರಿಗೆ ಪತ್ನಿಯರನ್ನ ಜೂಜಿಗಿಟ್ಟು ಆಡಿರುವುದು ಸುದ್ದಿಯಾಗಿದೆ. ಕೆಲ ವದಂತಿಗಳ ಪ್ರಕಾರ, ದುಬೈ ರಾಯಲ್ ಕುಟುಂಬದ ಸದಸ್ಯರು ಮುಂದಿನ ವಾರದ ಹೊತ್ತಿಗೆ ಹಣ ಕೊಟ್ಟು ಐವರೂ ಪತ್ನಿಯರನ್ನ ವಾಪಸ್ ಕರೆತರಲಿದ್ದಾರೆ ಎನ್ನಲಾಗಿದೆ.