ಈ ಹಿಂದೆ ಭಾರತೀಯರ ಬಗ್ಗೆ ಕಟುಮಾತುಗಳನ್ನಾಡಿದ್ದ ಅಮೇರಿಕಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕೊನೆಗೆ ಯು-ಟರ್ನ್ ತೆಗೆದುಕೊಂಡಿದ್ದು ನಿಮಗೆ ಗೊತ್ತಿರಲಿಕ್ಕೆ ಸಾಕು. ಭಾರತೀಯ ಮೂಲದವರ ಬೆಂಬಲವಿಲ್ಲದೆ ತನಗೆ ಜಯ ಅಸಾಧ್ಯ ಎಂಬ ಸತ್ಯದ ಅರಿವಾದ ಮೇಲೆ ಅವರು ಭಾರತೀಯರ ಓಲೈಕೆಯಲ್ಲಿ ತೊಡಗಿದ್ದಾರೆ. ಮತ್ತೀಗ ಅವರ ಕುಟುಂಬದವರು ಕೂಡ ಈ ಪ್ರಯತ್ನದಲ್ಲಿ ಅವರಿಗೆ ಸಾಥ್ ನೀಡಿದ್ದಾರೆ.
ವಿಶ್ವದಾದ್ಯಂತ ಹಿಂದೂಗಳು ದೀಪಾವಳಿ ಸಂಭ್ರಮದಲ್ಲಿ ತೊಡಗಿದ್ದು, ಡೊನಾಲ್ಡ್ ಸೊಸೆ (ದ್ವಿತೀಯ ಪುತ್ರ ಎರಿಕ್ ಟ್ರಂಪ್ ಪತ್ನಿ) ಲಾರಾ ಟ್ರಂಪ್ ಕೂಡ ಹಿಂದೂ ದೇವಾಲಯದಲ್ಲಿ ದೀಪಾವಳಿ ಆಚರಿಸಿ ಗಮನ ಸೆಳೆದಿದ್ದಾರೆ.
ವರ್ಜಿನಿಯಾದಲ್ಲಿರುವ ರಾಜಧಾನಿ ದೇವಸ್ಥಾನದ ಒಳಗೆ ಪ್ರವೇಶಿಸುವಾಗ ಭಾರತೀಯ ಸಂಸ್ಕೃತಿಯ ಗೌರವದ ಪ್ರತೀಕವಾಗಿ ಅವರು ತಮ್ಮ ಕಾಲಲ್ಲಿದ್ದ ಶೂವನ್ನು ಬಿಚ್ಚಿಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಹಿಂದೂ ಸಂಸ್ಕೃತಿಯನ್ನು ತುಂಬಾ ಇಷ್ಟಪಡುತ್ತೇನೆ ಮತ್ತು ಅದರ ಮೇಲೆ ಅಪಾರ ಗೌರವವನ್ನು ಹೊಂದಿದ್ದೇನೆ ಎಂದರು.
ಮುಂದುವರೆದು, ತಮ್ಮ ಮಾವ ಟ್ರಂಪ್ ಭಾರತ ಮತ್ತು ಭಾರತೀಯರ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದು, ಅವರು ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರೆ, ಅಮೇರಿಕಾ ಮತ್ತು ಭಾರತದ ಸಂಬಂಧ ಹೊಸ ಎತ್ತರಕ್ಕೆ ಏರಲಿದೆ ಎಂದರು ಲಾರಾ.
ಇಂಡೋ- ಅಮೇರಿಕನ್ ಕಮ್ಯುನಿಟಿ ಎಕ್ಟಿವಿಸ್ಟ್ ರಾಜೇಶ್ ಗೂಟಿ ಟ್ರಂಪ್ ಕುಟುಂಬದ ಸದಸ್ಯರನ್ನು ದೇವಸ್ಥಾನದ ಒಳಗೆ ಸ್ವಾಗತಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ