ಬೀಜಿಂಗ್: ಚೀನಾದಲ್ಲಿ ಕೊರೊನಾವೈರಸ್ ರೋಗ ವ್ಯಾಪಕವಾಗಿ ಹರಡಿದ್ದು ಹಲವಾರು ನಗರಗಳು ಅಕ್ಷರಶಃ ಸ್ತಬ್ಧವಾಗಿದೆ. ಭಾರತದಲ್ಲೂ ವೈರಸ್ ಭೀತಿ ಆವರಿಸಿದೆ.
ವಿಶ್ವದಾದ್ಯಂತ ಈ ವೈರಸ್ ಹರಡುವ ಅಪಾಯವಿದ್ದು, ಆಸ್ಟ್ರೇಲಿಯಾ, ಮಲೇಷ್ಯಾದಲ್ಲೂ ರೋಗ ತಗುಲಿದ ವರದಿಯಾಗಿದೆ. ಚೀನಾದಲ್ಲಂತೂ ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಕೆಲವು ಕಡೆ ಬೇರೆಲ್ಲಾ ಅಂಗಡಿಗಳು ಮುಚ್ಚಿದ್ದು, ಜನರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.
ಇನ್ನು, ಸೌದಿ ಅರೇಬಿಯಾದಲ್ಲಿ ಸೇವೆ ಸಲ್ಲಿಸುತ್ತಿರುವ ಕೇರಳ ಮೂಲದ ನರ್ಸ್ ಗೆ ಕೊರೊನಾವೈರಸ್ ತಗುಲಿದ ಶಂಕೆ ವ್ಯಕ್ತವಾಗಿತ್ತು. ಆದರೆ ಆಕೆಗೆ ವೈರಸ್ ತಗುಲಿಲ್ಲ ಎಂದು ಭಾರತೀಯ ರಾಯಭಾರಿ ಇಲಾಖೆ ಸ್ಪಷ್ಟಪಡಿಸಿದೆ. ಭಾರತದಲ್ಲಿ ಇದುವರೆಗೆ ಈ ಮಾರಣಾಂತಿಕ ವೈರಸ್ ತಗುಲಿದ ವರದಿಯಾಗಿಲ್ಲ. ಹಾಗಿದ್ದರೂ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.