ನವದೆಹಲಿ : ಶಾಂಘೈ ಚೀನಾದ ಅತಿದೊಡ್ಡ ಕೋವಿಡ್ -19 ಹಾಟ್ಸ್ಪಾಟ್ ಆಗಿ ಮಾರ್ಪಾಡಾಗಿದ್ದು, ಈಶಾನ್ಯ ಪ್ರಾಂತ್ಯದ ಜಿಲಿನ್ ಅನ್ನು ಈ ನಿಟ್ಟಿನಲ್ಲಿ ಹಿಂದಿಕ್ಕಿದೆ.
ದೇಶದ ಪೂರ್ವ ಕರಾವಳಿಯ ಹಣಕಾಸು ರಾಜಧಾನಿ ಎಂದೇ ಗುರುತಿಸಿಕೊಳ್ಳುವ ಶಾಂಘೈನಲ್ಲಿ ಶನಿವಾರ 2,676 ಹೊಸ ಪ್ರಕರಣಗಳು ವರದಿಯಾಗಿದ್ದು, ಶುಕ್ರವಾರಕ್ಕಿಂತ ಶೇ. 18ರಷ್ಟು ಏರಿಕೆಯಾಗಿದೆ ಎಂದು ವಿದೇಶಿ ಪತ್ರಿಕೆಗಳು ವರದಿ ಮಾಡಿವೆ.
ಕಳೆದ ಮೂರು ದಿನಗಳಲ್ಲಿ 26 ಮಿಲಿಯನ್ ಜನಸಂಖ್ಯೆ ಹೊಂದಿರುವ ನಗರದಲ್ಲಿ ಪ್ರಕರಣಗಳು ತೀವ್ರವಾಗಿ ಏರಿಕೆಯಾಗಿವೆ. ಗುರುವಾರ ಅಂದಿನ ದಾಖಲೆಯ 1609 ಪ್ರಕರಣಗಳಿಂದ ಶುಕ್ರವಾರಕ್ಕೆ 2267 ಪ್ರಕರಣಕ್ಕೆ ಏರಿಕೆಯಾಗಿತ್ತು.
ಶನಿವಾರ ಈ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ. ಇದು ಸೋಂಕಿತ ನೆರೆಹೊರೆಗಳು ಮತ್ತು ಅಪಾರ್ಟ್ಮೆಂಟ್ ಬ್ಲಾಕ್ಗಳ ಕಟ್ಟುನಿಟ್ಟಾದ ರೋಲಿಂಗ್ ಲಾಕ್ಡೌನ್ಗಳನ್ನು ಜಾರಿ ಮಾಡಿದ ಹೊರತಾಗಿಯೂ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.