ಬೀಜಿಂಗ್: ಗಡಿಯಲ್ಲಿ ತಗಾದೆ ತೆಗೆಯುತ್ತಿದ್ದ ಚೀನಾ ಭಾರತದ ನೀತಿ ನೋಡಿ ಬೆಚ್ಚಿದೆ. ಗಡಿ ಭಾಗದಲ್ಲಿ ಮಿಲಿಟರಿ ಶಕ್ತಿ ಪ್ರದರ್ಶನವೊಂದೇ ಮಾಡುತ್ತಿದ್ದರೆ ತಾನು ಜಾಗತಿಕವಾಗಿ ಬೆಂಬಲ ಕಳೆದುಕೊಳ್ಳಬೇಕಾದೀತು ಎಂದು ಬುದ್ದಿ ಕಲಿತಿದೆ.
ಗಡಿಯಲ್ಲಿ ಏನೇ ಮಾಡಿದರೂ, ತಲೆ ಕೆಡಿಸಿಕೊಳ್ಳದೆ ವ್ಯಾಪಾರ, ವಾಣಿಜ್ಯ ಕ್ಷೇತ್ರದಲ್ಲಿ ಭಾರತದ ಅಭಿವೃದ್ಧಿ ನೋಡಿ ಹೊಟ್ಟೆ ಉರಿಸಿಕೊಳ್ಳುತ್ತಿರುವ ಚೀನಾ ಮಾಧ್ಯಮಗಳು, ಗಡಿ ಗಲಾಟೆ ಬಿಟ್ಟು, ಶಾಂತವಾಗಿದ್ದುಕೊಂಡು ವಾಣಿಜ್ಯ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿ ಎಂದು ಸರ್ಕಾರಕ್ಕೆ ಸಲಹೆ ಮಾಡಿವೆ.
‘ಭಾರತದ ಅಭಿವೃದ್ಧಿ ನೋಡಿ ಚೀನಾ ‘ಶಾಂತವಾಗಿರಬೇಕು’. ನಮ್ಮ ವಾಣಿಜ್ಯ, ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿ ಮಾಡಬೇಕು. ಭಾರತದ ದೌರ್ಬಲ್ಯವೆಂದರೆ ದುಬಾರಿ ವೆಚ್ಚದ ಉತ್ಪಾದನೆ. ಇದನ್ನೇ ಚೀನಾ ಬಂಡವಾಳ ಮಾಡಿಕೊಂಡು ಜಾಗತಿಕ ಹೂಡಿಕೆದಾರರನ್ನು ತನ್ನತ್ತ ಸೆಳೆಯಬೇಕು. ಹಾಗೂ ನಾವು ಹೊಸದೊಂದು ಯುಗ ಸೃಷ್ಟಿಸಬೇಕು’ ಎಂದು ಅಲ್ಲಿನ ಸರ್ಕಾರಕ್ಕೆ ಸಲಹೆ ಮಾಡಿವೆ.
ಎರಡು ದಶಕಗಳ ಹಿಂದೆ ಚೀನಾದಲ್ಲಿ ನಡೆದ ಕೈಗಾರಿಕಾ ಕ್ರಾಂತಿ ಈಗ ಭಾರತದಲ್ಲಿ ಆಗುತ್ತಿದೆ. ಇದರಿಂದಾಗಿ ಭಾರತ ಜಾಗತಿಕ ಹೂಡಿಕೆದಾರರ ಸ್ವರ್ಗವಾಗಿ ಮಾರ್ಪಾಡಾಗುತ್ತಿದೆ ಎಂದು ಮಾಧ್ಯಮಗಳು ಹೊಟ್ಟೆ ಉರಿದುಕೊಂಡಿವೆ.