ಬೀಜಿಂಗ್(ಜು.21): ಬುಲೆಟ್ ರೈಲಿಗಿಂತಲೂ ವೇಗವಾಗಿ, ಗಂಟೆಗೆ 600 ಕಿ.ಮೀ. ವ್ರೕಗದಲ್ಲಿ ಚಲಿಸಬಲ್ಲ ಮೆಗ್ಲೇವ್ ರೈಲನ್ನು ಚೀನಾ ಪರಿಚಯಿಸಿದೆ. ಚೀನಾದ ಕಿಂಗ್ಡಾವೋ ನಗರದಲ್ಲಿ ತಯಾರಿಸಲಾದ ರೈಲಿನ ಮೊದಲ ಮಾದರಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ.
* ವಿಶ್ವದ ಅತಿ ವೇಗದ ಮೆಗ್ಲೇವ್ ರೈಲನ್ನು ಪರಿಚಯಿಸಿದ ಚೀನಾ
* ಚೀನಾದ ಹೊಸ ರೈಲಿನ ವೇಗ 600 ಕಿ.ಮೀ
* ಇದು ನೆಲದ ಮೇಲೆ ಒಡುವ ವಿಶ್ವದ ಅತಿ ವೇಗದ ವಾಹನ
ಇನ್ನು 5ರಿಂದ 10 ವರ್ಷದಲ್ಲಿ ಮೆಗ್ಲೇವ್ ರೈಲಿನ ಸೇವೆ ಆರಂಭವಾಗುವ ನಿರೀಕ್ಷೆ ಇದೆ. ಚೀನಾ ಕಳೆದ ಎರಡು ದಶಕಗಳಿಂದ ಮೆಗ್ಲೇವ್ ರೈಲಿನ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದೆ. ಶಾಂಘೈ ನಗರದಲ್ಲಿ ವಿಮಾನ ನಿಲ್ದಾಣದಿಂದ ನಗರದ ನಡುವೆ ಸಣ್ಣ ಮಾರ್ಗದಲ್ಲಿ ಮೆಗ್ಲೇವ್ ರೈಲನ್ನು ಓಡಿಸಲಾಗುತ್ತಿದೆ. ಆದರೆ, ಮೆಗ್ಲೇವ್ ರೈಲಿನ ಹೈಸ್ಪೀಸ್ ಮಾದರಿಯನ್ನು ಚೀನಾ ಸಿದ್ಧಪಡಿಸಿರುವುದು ಇದೇ ಮೊದಲು.
ಏನಿದು ಮೆಗ್ಲೇವ್ ರೈಲು?
ಸಾಂಪ್ರದಾಯಿಕ ರೈಲಿನಂತಲ್ಲದೇ ಮೆಗ್ಲೇವ್ ರೈಲು ಎಲೆಕ್ಟ್ರೋ- ಮೆಗ್ನೆಟಿಕ್ ಶಕ್ತಿಯ ನೆರವಿನಿಂದ ಚಲಿಸುತ್ತದೆ. ಆಯಸ್ಕಾಂತೀಯ ತೇಲುವಿಕೆಯಿಂದಾಗಿ ರೈಲು ಹಳಿಯನ್ನು ಸ್ಪರ್ಶಿಸದೇ ವೇಗವಾಗಿ ಚಲಿಸುತ್ತದೆ. ಇಲ್ಲಿ ಘರ್ಷಣೆ ಇಲ್ಲದೇ ಇರುವ ಕಾರಣಕ್ಕೆ ಬುಲೆಟ್ ರೈಲಿಗಿಂತಲೂ ವೇಗವಾಗಿ ರೈಲು ಸಾಗಬಲ್ಲದು. ನೂತನ ಹೈಸ್ಪೀಡ್ ರೈಲು ಅತಿ ಕಡಿಮೆ ಶಬ್ದ ಮತ್ತು ಅತಿ ಕಡಿಮೆ ಪ್ರಮಾಣದ ಕಂಪನವನ್ನು ಹೊಂದಿದೆ. ಜೊತೆಗೆ ಅತ್ಯಂತ ಸುರಕ್ಷಿತವೆನಿಸಿದೆ. ಇತರ ರೈಲಿನಂತೆ ಹೆಚ್ಚಿನ ಪ್ರಯಾಣಿಕರು ಸಂಚರಿಸಬಹುದಾಗಿದೆ.
ರೈಲಿನ ವಿಶೇಷತೆ ಏನು?
ಹಾಲಿ ಇರುವ ಬುಲೆಟ್ ರೈಲುಗಳು ಗಂಟೆಗೆ ಗರಿಷ್ಠ 350 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ಆದರೆ, ಮೆಗ್ಲೇವ್ ರೈಲು ಗಂಟೆಗೆ ಗರಿಷ್ಠ 600 ಕಿ.ಮೀ. ವೇಗದಲ್ಲಿ ಸಾಗಬಲ್ಲದು.
ಉದಾಹರಣೆಗೆ ರೈಲು ಸೇವೆ ಆರಂಭವಾದ ಬಳಿಕ ಶಾಂಘೈ ಮತ್ತು ಬೀಜಿಂಗ್ ನಡುವಿನ 1000 ಕಿ.ಮೀ.ಗಿಂತಲೂ ಹೆಚ್ಚಿನ ದೂರವನ್ನು ಕೇವಲ 2.5 ಗಂಟೆಯಲ್ಲಿ ಮೆಗ್ಲೇವ್ ರೈಲು ಸಾಗಬಲ್ಲದು. ಆದರೆ, ಇದೇ ದೂರವನ್ನು ವಿಮಾನದಲ್ಲಿ ಕ್ರಮಿಸಲು 3 ಗಂಟೆ ಹಾಗೂ ಹೈಸ್ಪೀಡ್ ರೈಲಿನಲ್ಲಿ 5.5 ಗಂಟೆ ಬೇಕಾಗಲಿದೆ