ನವದೆಹಲಿ: ಸಿಕ್ಕಿಂ ಗಡಿಯಲ್ಲಿ ಸೇನಾ ಪಡೆಗಳನ್ನು ಬಿಟ್ಟು ಗಡಿ ತಗಾದೆ ತೆಗೆಯುತ್ತಿರುವ ಚೀನಾ ಮತ್ತೊಂದೆಡೆ ಹಿಂದೂ ಮಹಾಸಾಗರ ತಟದಲ್ಲಿ ಸೇನಾ ನೆಲೆಗಳನ್ನು ಸ್ಥಾಪಿಸಿ ಭಾರತವನ್ನು ಸುತ್ತುವರಿಯಲು ವ್ಯೂಹ ರಚಿಸಿದೆ.
ಆಫ್ರಿಕಾ ಮತ್ತು ಮಧ್ಯಪ್ರಾಚ್ಯಕ್ಕೆ ಹತ್ತಿರವಾದ ಜಿಬೋಟಿ ಎಂಬಲ್ಲಿ ನೌಕಾ ನೆಲೆ ಸ್ಥಾಪಿಸಿರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ. ಇದು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಜಗತ್ತಿನ ವಿವಿಧ ದೇಶಗಳು ಇಲ್ಲಿ ನೌಕಾ ನೆಲೆಯನ್ನು ಹೊಂದಿವೆ.
ಒಂದು ವೇಳೆ ಚೀನಾ ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲೂ ನೌಕಾ ನೆಲೆ ಸ್ಥಾಪಿಸಲು ಯಶಸ್ವಿಯಾದರೆ, ಭಾರತವನ್ನು ಸುತ್ತುವರಿದಂತಾಗುತ್ತದೆ. ಕಳೆದ ಎರಡು ತಿಂಗಳಿನಿಂದ ಹಿಂದೂ ಮಹಾಸಾಗರದಲ್ಲಿ ಚೀನಾ ನೌಕಾ ಪಡೆಗಳ ಓಡಾಟ ಹೆಚ್ಚಿರುವುದೂ ಭಾರತದ ಕಳವಳಕ್ಕೆ ಕಾರಣವಾಗಿದೆ.
ಆದರೆ ಈ ವಿಚಾರದಲ್ಲಿ ಭಾರತಕ್ಕೆ ಅಮೆರಿಕಾದ ಬೆಂಬಲ ಸಿಗಬಹುದೆಂದು ಲೆಕ್ಕಾಚಾರ ಹಾಕಲಾಗಿದೆ. ಯಾಕೆಂದರೆ ಚೀನಾ ನೌಕಾ ನೆಲೆ ಸ್ಥಾಪಿಸಿದ ಕೆಲವೇ ಕಿ.ಮೀ.ಗಳ ಅಂತರದಲ್ಲಿ ಅಮೆರಿಕಾದ ನೌಕಾ ನೆಲೆಯಿದೆ. ಇವರಿಬ್ಬರ ತಿಕ್ಕಾಟ ಭಾರತಕ್ಕೆ ಲಾಭವಾಗಬಹುದೆಂದು ಲೆಕ್ಕಾಚಾರ ಹಾಕಲಾಗಿದೆ. ಹಾಗಿದ್ದರೂ, ಭಾರತಕ್ಕೆ ಈ ಮಾರ್ಗವಾಗಿ ಮಧ್ಯಪ್ರಾಚ್ಯ ಪ್ರದೇಶದಿಂದ ತೈಲ ಪೂರೈಕೆಯಾಗುತ್ತಿರುವ ಪ್ರಕ್ರಿಯೆಗೆ ಚೀನಾ ಅಡ್ಡಿಪಡಿಸಬಹುದೆಂಬುದು ನಮ್ಮ ದೇಶ ಆತಂಕಪಡಬೇಕಾದ ವಿಷಯವಾಗಿದೆ.