ಬ್ರೆಜಿಲ್: ಜನವಸತಿ ಪ್ರದೇಶದಲ್ಲಿ ವಿಮಾನ ಪತನವಾಗಿದ್ದರಿಂದ ಬ್ರೆಜಿಲ್ ನಲ್ಲಿ ಸುಮಾರು 62 ಮಂದಿ ಪ್ರಾಣ ಕಳೆದುಕೊಂಡ ಧಾರುಣ ಘಟನೆ ನಡೆದಿದೆ. ಸಾವೊ ಪಾಲೊ ನಗರದ ಜನವಸತಿ ಕೇಂದ್ರದಲ್ಲಿ ವಿಮಾನ ಪತನವಾಗಿದೆ.
ತಾಂತ್ರಿಕ ದೋಷದಿಂದಾಗಿ ವಿಮಾನ ಪತನಗೊಂಡಿದೆ. ಪರಿಣಾಮ, ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸ್ಥಳೀಯರು ಸೇರಿದಂತೆ 62 ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿ ಒಟ್ಟು 58 ಮಂದಿ ಪ್ರಯಾಣಿಕರಿದ್ದರು. ಅವರೆಲ್ಲರೂ ಸಜೀವ ದಹನವಾಗಿದ್ದಾರೆ ಎನ್ನಲಾಗಿದೆ.
ಏರ್ ಲೈನ್ ವೊಪಾಸ್ ಲಿನ್ಹಾಸ್ ಏರಿಯಾಸ್ ನಿರ್ವಹಿಸುತ್ತಿದ್ದ ಎಟಿಆರ್-72 ಟರ್ಬೊಪ್ರೊಪ್ ವಿಮಾನ ಪತನಗೊಂಡಿದೆ. ಪರಾನಾ ರಾಜ್ಯದಿಂದ ಕ್ಯಾಸ್ಕಾವೆಲ್ ಕಡೆಗೆ ಪ್ರಯಾಣಿಸುವಾಗ ಸಾವೊ ಪಾಲೊ ನಗರದ ಬಳಿ ಪತನಗೊಂಡಿದೆ. ತಾಂತ್ರಿಕ ದೋಷದಿಂದಾಗಿ ವಿಮಾನ ಆಕಾಶದಲ್ಲೇ ಗಿರಕಿ ಹೊಡೆದು ಬಳಿಕ ಕೆಳಗೆ ಬಿದ್ದಿದೆ.
ಕೆಳಗೆ ಬಿದ್ದ ತಕ್ಷಣ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಂಪೂರ್ಣ ಭಸ್ಮವಾಗಿದೆ. ತಕ್ಷಣವೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಿಸುವ ಕೆಲಸ ಮಾಡಿದ್ದಾರೆ. ಆದರೆ ಜನವಸತಿ ಕೇಂದ್ರದಲ್ಲಿ ವಿಮಾನ ಪತನವಾಗಿರುವುದರಿಂದ ಮತ್ತು ವಿಮಾನದಲ್ಲೂ ಬೆಂಕಿ ಕಾಣಿಸಿಕೊಂಡಿದ್ದರಿಂದ ಸಾಕಷ್ಟು ಸಾವು-ನೋವು ಸಂಭವಿಸಿದೆ.