ಅಮೇರಿಕಾದ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಬರಾಕ್ ಒಬಾಮಾ ಇಂದು ತಮ್ಮ ದೇಶವಾಸಿಗಳನ್ನುದ್ದೇಶಿಸಿ ವಿದಾಯ ಭಾಷಣವನ್ನು ಮಾಡಿದ್ದಾರೆ. ಕೊನೆಯ ಭಾಷಣದಲ್ಲೂ ಭಾರತವನ್ನು ಉಲ್ಲೇಖಿಸಿದ ಅವರು, ತನ್ನ ಅಧಿಕಾರದ ಅವಧಿಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಗಟ್ಟಿಗೊಂಡಿದೆ ಎಂದಿದ್ದಾರೆ.
ಚಿಕಾಗೋದಲ್ಲಿ ತಮ್ಮ ಕೊನೆಯ ಅಧ್ಯಕ್ಷೀಯ ಭಾಷಣ ಮಾಡಿದ ಅವರು ಒಂದು ಕ್ಷಣ ಭಾವುಕರಾದರು. "ನೀವೆಲ್ಲರೂ ಸೇರಿ ನನ್ನನ್ನು ಉತ್ತಮ ವ್ಯಕ್ತಿ ಮತ್ತು ಅಧ್ಯಕ್ಷನನ್ನಾಗಿ ಮಾಡಿದ್ದೀರಿ. ಪ್ರತಿದಿನ ನಾನು ನಿಮ್ಮಿಂದ ಕಲಿಯುತ್ತಾ ಇದ್ದೆ. ಇಂದು ನಿಮಗೆಲ್ಲ ಧನ್ಯವಾದ ಹೇಳುವ ಸಮಯ ಬಂದಿದೆ. ಓರ್ವ ಸಾಮಾನ್ಯ ಮನುಷ್ಯನೂ ಬದಲಾವಣೆ ತರಬಹುದು. ನಿಮ್ಮೆಲ್ಲರ ಸಹಕಾರದಿಂದ ಅಮೇರಿಕಾ ಬಲಿಷ್ಠ ದೇಶವಾಗಿದೆ. ನಾವೆಲ್ಲರೂ ಸೇರಿ ದೇಶವನ್ನು ಮುನ್ನಡೆಸೋಣ", ಎಂದರು.
ಕಳೆದ 8 ವರ್ಷಗಳಿಂದ ಅಮೇರಿಕಾದಲ್ಲಿ ಉಗ್ರರ ದಾಳಿಯಾಗಿಲ್ಲ. ಮುಸಲ್ಮಾನರೂ ಸಹ ನಮ್ಮಷ್ಟೇ ದೇಶಭಕ್ತರು. ಅವರ ವಿರುದ್ಧದ ಭೇದಭಾವವನ್ನು ನಾನು ನಿರಾಕರಿಸುತ್ತೇನೆ. ದೇಶದಲ್ಲಿರುವ ಜನಾಂಗೀಯ ತಾರತಮ್ಯವನ್ನು ಹೋಗಲಾಡಿಸಲು ಕಠಿಣ ಕಾನೂನು ಜಾರಿಯಾಗಬೇಕಿದೆ. ಜತೆಗೆ ನಮ್ಮ ಮನಸ್ಸು ಕೂಡ ಬದಲಾಗಬೇಕು ಎಂದು ಒಬಾಮಾ ಹೇಳಿದ್ದಾರೆ.
ಕೊನೆಯಲ್ಲಿ ಮುಂದಿನ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಒಬಾಮಾ ಶುಭ ಹಾರೈಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.