ಇಂಡೋನೇಷಿಯಾ: ಇಂಡೋನೇಷಿಯಾದ ಬಾಲಿಯ ಹೋಟೆಲ್ ವೊಂದರಿಂದ ವಸ್ತುಗಳನ್ನು ಕದಿಯುವುದರ ಮೂಲಕ ಭಾರತೀಯ ಕುಟುಂಬವೊಂದು ಮುಜುಗರಕ್ಕೀಡಾಗಿದೆ.
ಇಂಡೋನೇಷಿಯಾಕ್ಕೆ ಪ್ರವಾಸಕ್ಕೆ ಹೋದ ಭಾರತೀಯ ಕುಟುಂಬವೊಂದು ಅಲ್ಲಿ ಹೋಟೆಲ್ ವೊಂದರಲ್ಲಿ ತಂಗಿದ್ದಾಗ ಅಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು, ಅಲಂಕಾರಿಕ ವಸ್ತುಗಳು, ಟವಲ್, ಹ್ಯಾಂಗರ್, ಹೇರ್ ಡ್ರೈಯರ್, ಕಲಾಕೃತಿ ಗಳನ್ನು ಕಳ್ಳತನ ಮಾಡಿದ್ದಾರೆ. ಅವರು ಹೋಟೆಲ್ ನಿಂದ ಕದ್ದ ವಸ್ತುಗಳನ್ನು ಲಗೇಜಿನಲ್ಲಿ ತುಂಬಿಕೊಂಡು ಹೊರಟಿದಾಗ ತಪಾಸಣೆಗೆಂದು ಹೋಟೆಲ್ ಸಿಬ್ಬಂದಿ ಚೆಕ್ ಮಾಡಿದ್ದಾರೆ. ಆಗ ಇವರ ಕರ್ಮಕಾಂಡವೆಲ್ಲಾ ಬಹಿರಂಗವಾಗಿದೆ.
ಇಂತಹ ನಾಚಿಕೆಗೇಡಿನ ಅವರ ಕಾರ್ಯವನ್ನು ಹೋಟೆಲ್ ಉದ್ಯೋಗಿಯೊಬ್ಬರು ಚಿತ್ರಿಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಸಾಲದಕ್ಕೆ ಲಗೇಜ್ ಚೆಕ್ ಮಾಡಿದ್ದಕ್ಕೆ ಆ ಕುಟುಂಬದ ಓರ್ವ ಸದಸ್ಯೆ ಮೊದಲು ಹೋಟೆಲ್ ಸಿಬ್ಬಂದಿ ಜೊತೆ ಜಗಳ ತೆಗೆದಿದ್ದು, ಬಳಿಕ ಇದಕ್ಕೆ ದಂಡ ನೀಡುವುದಾಗಿ ಹೇಳಿ ಕ್ಷಮೆ ಕೇಳಿದ್ದಾರೆ.
ಆದರೆ ಈ ವಿಡಿಯೋ ನೋಡಿ ಭಾರತೀಯರು ರೊಚ್ಚಿಗೆದ್ದಿದ್ದು, ಇಂತಹ ನಾಚಿಕೆಗೇಡಿನ ಕಾರ್ಯಗಳನ್ನು ಮಾಡುವ ಮೂಲಕ ದೇಶದ ಮಾನ ಮರ್ಯಾದೆ ತೆಗೆಯುವವರ ಪಾಸ್ ಪೋರ್ಟ್ ಗಳನ್ನು ಸರ್ಕಾರ ರದ್ದುಗೊಳಿಸಬೇಕು ಎಂದು ಹೇಳಿದ್ದಾರೆ.