ನವದೆಹಲಿ: ಢೋಕ್ಲಂ ಗಡಿಯಲ್ಲಿ ಸಮರಾಭ್ಯಾಸ ನಡೆಸಿ ಭಾರತಕ್ಕೆ ಎಚ್ಚರಿಕೆ ನೀಡಿದ್ದ ಚೀನಾ ಇದೀಗ ಮತ್ತೊಮ್ಮೆ ಬೆದರಿಸುವ ಯತ್ನ ನಡೆಸಿದೆ. ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಹದಗೆಡುತ್ತಿರುವ ಹಿನ್ನಲೆಯಲ್ಲಿ ಅಮೆರಿಕಾ ಮಧ್ಯಪ್ರವೇಶಿಸಿ ಮಾತುಕತೆ ನಡೆಸಲು ಸೂಚನೆ ನೀಡಿದೆ.
‘ಢೋಕ್ಲಾಂ ಗಡಿಯಲ್ಲಿ ಅನವಶ್ಯಕವಾಗಿ ತಗಾದೆ ತೆಗೆದರೆ ಇನ್ನು ಸುಮ್ಮನಿರುವುದಿಲ್ಲ. ಕೂಡಲೇ ಸೇನೆ ಹಿಂದಕ್ಕೆ ತೆಗೆಯಿರಿ. ಇಲ್ಲದಿದ್ದರೆ ಎಲ್ಲಾ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿ. ಗಡಿ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳದಿರಿ’ ಎಂದು ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿದೆ.
ಬೀಜಿಂಗ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ತನ್ನ ಎಚ್ಚರಿಕೆ ಸಂದೇಶ ರವಾನಿಸಿರುವ ಚೀನಾ ಭಾರತೀಯ ಸೇನೆ ಕಾನೂನು ಬಾಹಿರವಾಗಿ ಗಡಿಯಲ್ಲಿ ಅತಿಕ್ರಮಣ ನಡೆಸಿವೆ ಎಂದು ಆರೋಪಿಸಿದೆ. ಭಾರತದ ಈ ನಡೆಗೆ ರಾಜತಾಂತ್ರಿಕ ಅಧಿಕಾರಿಗಳೇ ಶಾಕ್ ಆಗಿದ್ದಾರೆ ಎಂದು ಚೀನಾ ಹೇಳಿಕೊಂಡಿದೆ.
ಈ ನಡುವೆ ಚೀನಾ ವಿರುದ್ಧ ನಾವು ತಪ್ಪಾಗಿ ನಡೆದುಕೊಂಡಿಲ್ಲ. ಪ್ರತೀ ಬಾರಿಯೂ ಚೀನಾ ಇದೇ ರೀತಿ ಕಾಲ್ಕೆರೆದು ಜಗಳಕ್ಕೆ ಬರುತ್ತದೆ. ಆದರೆ ಈ ಬಾರಿ ಯಾಕೋ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಹೇಳಿದ್ದಾರೆ. ಈ ನಡುವೆ ಏಷ್ಯಾದ ಎರಡು ದೈತ್ಯ ಶಕ್ತಿಗಳ ಗುದ್ದಾಟಕ್ಕೆ ಕಳವಳ ವ್ಯಕ್ತಪಡಿಸಿರುವ ಅಮೆರಿಕಾ, ಶಾಂತಿಯುತವಾಗಿ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೂಚಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ