ಕೇಂದ್ರ ಗ್ವಾಟೆಮಾಲಾದ ನಿರಾಶ್ರಿತ ಶಿಬಿರವೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಕನಿಷ್ಠ 21 ಮಕ್ಕಳು ಸಜೀವ ದಹನವಾಗಿದ್ದಾರೆ.
23ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಅವರಲ್ಲಿ 14 ಜನರ ಸ್ಥಿತಿ ಚಿಂತಾಜನಕವಾಗಿದೆ, ಎಂಬ ಮಾಹಿತಿ ಇದೆ.
ಶಿಬಿರದ ಮೂಲಭೂತ ಸೌಕರ್ಯಗಳ ಕುರಿತಂತೆ ಕೆಲ ಯುವಕರು ಅಸಮಧಾನ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ಘರ್ಷಣೆ ನಡೆದಿತ್ತು. ಹೀಗಾಗಿ ಉದ್ರಿಕ್ತ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
800ಕ್ಕೂ ಹೆಚ್ಚು ಮಂದಿ ನಿರಾಶ್ರಿತರಿರುವ ಶಿಬಿರ ಕೇವಲ 500 ಬೆಡ್‌ಗಳ ಸಾಮರ್ಥ್ಯ ಹೊಂದಿದೆ. ಜತೆಗೆ ಆಹಾರದ ಗುಣಮಟ್ಟವೂ ಸಹ ಕಳಪೆಯಾಗಿದೆ ಎಂಬ ಕಾರಣಕ್ಕೆ ಮಂಗಳವಾರ ರಾತ್ರಿ ಸುಮಾರು 60ಕ್ಕಿಂತ ಹೆಚ್ಚು ಹದಿಹರೆಯದವರು ಗಲಾಟೆ ಮಾಡಿದ್ದರು.
ಶಿಬಿರದಲ್ಲಿದ್ದ ಹತ್ತಿಯ ಹಾಸಿಗೆ, ಮರದ ಶೀಟ್‌ಗಳಿಗೆ ಹಬ್ಬಿದ ಬೆಂಕಿ ವ್ಯಾಪಕವಾಗಿ ಹರಡಿ ಇಷ್ಟು ದೊಡ್ಡ ಅನಾಹುತ ಸಂಭವಿಸಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.