ನವದೆಹಲಿ: ಸಿಕ್ಕಿಂ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ನಡೆಯುತ್ತಿದ್ದರ, ಇತ್ತ ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನ ಮೂಗು ತೂರಿಸಲು ಹೊರಟಿರುವುದು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವುದು ಖಚಿತವಾಗಿದೆ.
ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿಯಾದ ಬೆನ್ನಲ್ಲೇ ಭಾರತದಲ್ಲಿರುವ ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ಚೀನಾ ರಾಯಭಾರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ಸಿಕ್ಕಿಂ ಗಡಿಯಲ್ಲಿ ಚೀನಾ ಪಡೆಗಳು ರಸ್ತೆ ನಿರ್ಮಿಸಲು ಹೊರಟಿರುವುದನ್ನು ಭಾರತೀಯ ಸೇನೆ ತಡೆದಿರುವುದು ಈ ಸಂದರ್ಭದಲ್ಲಿ ಚರ್ಚೆಯಾಯಿತು ಎನ್ನಲಾಗಿದೆ.
ಇಷ್ಟೇ ಅಲ್ಲದೆ, ಪಾಕ್ ರಾಯಭಾರಿ ಸಿಕ್ಕಿಂ ಗಡಿಗೆ ಹೊಂದಿಕೊಂಡಿರುವ ಇನ್ನೊಂದು ರಾಷ್ಟ್ರ ಭೂತಾನ್ ರಾಯಭಾರಿಯನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಭಾರತ-ಚೀನಾ ಗಡಿ ವಿವಾದದಲ್ಲಿ ಪಾಕ್ ಮೂಗು ತೂರಿಸುತ್ತಿರುವುದು ಇನ್ನಷ್ಟು ಅಸಮಾಧಾನಕ್ಕೆ ಕಾರಣವಾಗಬಹುದೆಂದು ವಿಶ್ಲೇಷಿಸಲಾಗಿದೆ.