Hair Oil: ಕೂದಲು ಮತ್ತು ನೆತ್ತಿಗೆ ಎಣ್ಣೆ ಹಚ್ಚುವುದು ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಕೂದಲಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಲ್ಲದೇ ನೀವು ಕೆಲ ಎಣ್ಣೆಗಳನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.
ನಿಮ್ಮ ತಾಯಿಯು ನಿಮ್ಮ ಕೂದಲಿಗೆ ಎಣ್ಣೆ ಹಚ್ಚಲು ಅದೆಷ್ಟೇ ಬಾರಿ ಹೇಳಿದರೂ ನೀವು ಕೇಳಿರುವುದಿಲ್ಲ, ಆದರೆ ಅವರ ಮಾತನ್ನು ಕೇಳಬೇಕಾಗಿತ್ತು ಎಂದು ಕೂದಲಿನ ಈಗಿನ ಪರಿಸ್ಥಿತಿ ನೋಡಿ ಅನಿಸಿರುತ್ತದೆ. ನಿಮ್ಮ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಸುಲಭ ಮತ್ತು ಪರಿಣಾಮಕಾರಿ ಪರಿಹಾರವೆಂದರೆ ಅದು ಎಣ್ಣೆ. ಮಾಲಿನ್ಯ, ಒತ್ತಡ, ಜೀವನಶೈಲಿ, ಆಹಾರ ಮುಂತಾದ ಅಂಶಗಳು ಹಲವಾರು ಕೂದಲಿನ ಸಮಸ್ಯೆಗಳಿಗೆ ಕಾರಣವಾಗಿವೆ. ಜೊತೆಗೆ ನೀವು ಬಳಸುವ ಕೂದಲು ಉತ್ಪನ್ನಗಳು ರಾಸಾಯನಿಕಗಳಿಂದ ತುಂಬಿರುವ ಕಾರಣ ಕೂದಲಿಗೆ ಹೆಚ್ಚಿನ ಹಾನಿಯಾಗುತ್ತಿದೆ. ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಉತ್ತಮ ಮಾರ್ಗವೆಂದರೆ ವಾರಕ್ಕೆ ಎರಡು ಬಾರಿಯಾದರೂ ನಿಮ್ಮ ಕೂದಲಿಗೆ ಎಣ್ಣೆ ಹಚ್ಚುವುದು. ಆಯುರ್ವೇದದ ಪ್ರಕಾರ, ನೆತ್ತಿಯು ಮರ್ಮಸ್ ಎಂದು ಕರೆಯಲ್ಪಡುವ ವಿಭಿನ್ನ ಶಕ್ತಿಯನ್ನು ನಿವಾರಿಸುವ ಅಂಶಗಳಿಂದ ಕೂಡಿದೆ. ಕೂದಲು ಮತ್ತು ನೆತ್ತಿಗೆ ಎಣ್ಣೆ ಹಚ್ಚುವುದು ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಕೂದಲಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಲ್ಲದೇ ನೀವು ಕೆಲ ಎಣ್ಣೆಗಳನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು, ಇದು ನಿಮಗೆ ನೈಸರ್ಗಿಕವಾಗಿ ಉತ್ತಮವಾಗಿರುತ್ತದೆ.
ಹಾಗಾದರೆ ಯಾವ ಎಣ್ಣೆಗಳನ್ನು ಹೇಗೆ ಮನೆಯಲ್ಲಿ ತಯಾರಿಸಬಹುದು ಎಂಬುದು ಇಲ್ಲಿದೆ.
ಈರುಳ್ಳಿ ಎಣ್ಣೆ
ಈರುಳ್ಳಿ ಎಣ್ಣೆಯು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಸೀಳು ಒಡೆಯುವುದನ್ನು ತಡೆಯಲು ಒಳ್ಳೆಯ ಪರಿಹಾರ. ಈರುಳ್ಳಿಯಲ್ಲಿ ಹೆಚ್ಚಿನ ಸಲ್ಫರ್ ಅಂಶವು ಅನೇಕ ಕೂದಲಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದು ಕೂದಲಿನ ನಿಯಮಿತ ಪಿಎಚ್ ಮಟ್ಟವನ್ನು ನಿರ್ವಹಿಸುತ್ತದೆ.
ಮಾಡುವ ವಿಧಾನ: ಈರುಳ್ಳಿ ಮತ್ತು ಕರಿಬೇವಿನ ಎಲೆಗಳನ್ನು ಚೆನ್ನಾಗಿ ಪೇಸ್ಟ್ ಮಾಡಿ. ಈ ಪೇಸ್ಟ್ ಗೆ ತೆಂಗಿನ ಎಣ್ಣೆಯನ್ನು ಸೇರಿಸಿ ಮತ್ತು ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಕಾಯಿಸಿ. 5 ರಿಂದ 10 ನಿಮಿಷಗಳ ನಂತರ ಉರಿಯನ್ನು ಹೆಚ್ಚಿಸಿ ಮತ್ತು ಕುದಿಯಲು ಬಿಡಿ. 15 ನಿಮಿಷಗಳ ನಂತರ ಉರಿ ಕಡಿಮೆ ಮಾಡಿ 5 ಮಿನಿಷ ಕುದಿಸಿ ಆಫ್ ಮಾಡಿ. ರಾತ್ರಿಯಿಡೀ ಈ ಮಿಶ್ರಣವನ್ನು ಹಾಗೆಯೇ ಬಿಡಿ. ಬೆಳಗ್ಗೆ ಎಣ್ಣೆಯನ್ನು ತಣಿಸಿ ಮತ್ತು ಸರಿಯಾದ ಪಾತ್ರೆಯಲ್ಲಿ ಎಣ್ಣೆಯನ್ನು ಸಂಗ್ರಹಿಸಿ.
ಪುದೀನ ಎಣ್ಣೆ
ಪುದೀನ ಎಣ್ಣೆಯು ವಾಸೋಡಿಲೇಟರ್ನೊಂದಿಗೆ ರಕ್ತ ಪರಿಚಲನೆ ಹೆಚ್ಚು ಮಾಡಿ, ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ. ಇದು ನಿಮ್ಮ ಕೂದಲಿಗೆ ತಾಜಾ ಸುವಾಸನೆಯನ್ನು ಕೂಡ ನೀಡುತ್ತದೆ.
ಮಾಡುವ ವಿಧಾನ: ಕೆಲವು ಪುದೀನ ಎಲೆಗಳನ್ನು ಪುಡಿಮಾಡಿ. ಪುಡಿ ಮಾಡಿದ ಪುದೀನ ಎಲೆಗಳನ್ನು ಜಾರ್ನಲ್ಲಿ ಹಾಕಿ ಅದಕ್ಕೆ ಸ್ವಲ್ಪ ಬಾದಾಮಿ ಎಣ್ಣೆ ಸೇರಿಸಿ ಮತ್ತು ಜಾರ್ ಅನ್ನು ಸೂರ್ಯನ ಬೆಳಕಿನಲ್ಲಿ ಎರಡು ಮೂರು ದಿನಗಳವರೆಗೆ ಬಿಡಿ. ನಂತರ ಎಣ್ಣೆಯನ್ನು ಬಳಸಬಹುದು.
ತುಳಸಿ ಮತ್ತು ಬೇವಿನ ಎಲೆ
ತುಳಸಿ ಮತ್ತು ಬೇವು ನೆತ್ತಿಯ ಸಮಸ್ಯೆಗಳನ್ನು ಗುಣಪಡಿಸಲು ಮತ್ತು ಕೂದಲು ಉದುರುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಪದಾರ್ಥಗಳ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳು ನೆತ್ತಿಯ ತುರಿಕೆಯನ್ನು ಗುಣಪಡಿಸಲು ಮತ್ತು ತಲೆಹೊಟ್ಟು ತಡೆಯಲು ಸಹಾಯ ಮಾಡುತ್ತದೆ.
ಮಾಡುವ ವಿಧಾನ: ತೆಂಗಿನ ಎಣ್ಣೆ, ತಾಜಾ ತುಳಸಿ ಮತ್ತು ಬೇವಿನ ಎಲೆಗಳು ಮತ್ತು ಸಮಾನ ಪ್ರಮಾಣದಲ್ಲಿ ಮೆಂತ್ಯ ಬೀಜಗಳನ್ನು ತೆಗೆದುಕೊಳ್ಳಿ. ಅವುಗಳನ್ನು ಚೆನ್ನಾಗಿ ಪುಡಿಮಾಡಿ, ಕುದಿಸಿ ಮತ್ತು ಮಿಶ್ರಣವನ್ನು ಸೋಸಿದರೆ ಎಣ್ಣೆ ರೆಡಿ.
ದಾಸವಾಳದ ಎಣ್ಣೆ
ದಾಸವಾಳವನ್ನು ಕೂದಲಿನ ಬೆಳವಣಿಗೆಗೆ ಅತ್ಯುತ್ತಮವಾದ ವಸ್ತು ಎಂಬುದು ಎಲ್ಲರಿಗೂ ತಿಳಿದಿದೆ. ಸಾಮಾನ್ಯವಾಗಿ ಗಿಡಮೂಲಿಕೆಗಳ ಕೂದಲಿನ ಎಣ್ಣೆಗಳಲ್ಲಿ ಬಳಸಲಾಗುತ್ತದೆ.
ಮಾಡುವ ವಿಧಾನ: ಸುಮಾರು ಎಂಟು ದಾಸವಾಳ ಹೂವುಗಳನ್ನು ತೆಗೆದುಕೊಳ್ಳಿ, ಅವುಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ಪೇಸ್ಟ್ ಅನ್ನು ತೆಂಗಿನ ಎಣ್ಣೆಗೆ ಸೇರಿಸಿ ಬಣ್ಣ ಬದಲಾಗುವವರೆಗೆ ಕುದಿಸಿ. ನಂತರ ಎಣ್ಣೆಯನ್ನು ತಣ್ಣಗಾಗಿಸಿ ಬಳಸಿ.