ಬೆಂಗಳೂರು: ಚಳಿಗಾಲದಲ್ಲಿ ಚರ್ಮ ಬಿರುಕು ಬಿಟ್ಟಂತಾಗುವುದು, ತುರಿಕೆ, ಬಿಳಿಯಾಗುವುದು ಇದೆಲ್ಲಾ ಸಹಜ. ಇದಕ್ಕೆ ನಾವು ಕೈಗೆ ಸಿಗುವ ಕ್ರೀಂ ಹಚ್ಚಿ ಬಿಡುತ್ತೇವೆ. ಅದಕ್ಕಿಂತ ಆರೋಗ್ಯಕರವಾಗಿ ಮನೆಯಲ್ಲೇ ಮಾಡುವ ಕೆಲವು ಪರಿಹಾರಗಳು ಇಲ್ಲಿವೆ ನೋಡಿ.
ಸ್ನಾನ ಮಾಡುವ ಮೊದಲು ಕೈಕಾಲುಗಳಿಗೆ ತುಪ್ಪ ಹಚ್ಚಿ ಸ್ನಾನ ಮಾಡಿ. ಸ್ನಾನದ ನಂತರವೂ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಿ. ಅತಿಯಾದ ಬಿಸಿ ನೀರಿನ ಸ್ನಾನ ಬೇಡ. ಚಳಿಗೆ ಮೈ ಬೆಚ್ಚಗೆ ಮಾಡಿಕೊಡಲು ಅತಿಯಾದ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದಲೂ ಚರ್ಮ ಒಣಗಿದಂತಾಗುತ್ತದೆ. ಹದ ಬಿಸಿ ನೀರು ಮತ್ತು ಹದವಾಗಿ ಸೋಪ್ ಬಳಕೆ ಮಾಡಿಕೊಂಡು ಸ್ನಾನ ಮಾಡುವುದು ಉತ್ತಮ.
ಒಟ್ಟಾರೆ ಚರ್ಮದಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳಬೇಕಾಗಿರುವುದು ಮುಖ್ಯ. ಅದಕ್ಕಾಗಿ ಹಾಲಿನ ಕೆನೆ ಹಚ್ಚಿಕೊಳ್ಳಬಹುದು. ಇನ್ನು, ಚರ್ಮದ ತುರಿಕೆಗೆ ಅಂತಹ ಜಾಗಕ್ಕೆ ಮೊಸರು ಹಚ್ಚಕೊಳ್ಳಬಹುದು.
ಮನೆಯಲ್ಲೇ ಅಲ್ಯುವಿರಾ ಬೆಳೆಸಿದ್ದರೆ, ಇದರ ಲೋಳೆ ರಸವನ್ನು ಹಚ್ಚಿಕೊಳ್ಳುವುದೂ ಚರ್ಮ ತಂಪಾಗಿರುವಂತೆ ಮಾಡುತ್ತದೆ. ಕೊಬ್ಬರಿ ಎಣ್ಣೆಯಂತೆ, ತೆಂಗಿನ ಹಾಲನ್ನೂ ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಕಾಂತಿ ಬರುವುದು ಮಾತ್ರವಲ್ಲ, ತುರಿಕೆ, ಒಣಗಿದಂತಾಗುವುದಕ್ಕೆ ಪರಿಹಾರ ಒದಗಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಮಯದಲ್ಲಿ ದೇಹಕ್ಕೆ ಸಾಕಷ್ಟು ದ್ರವಾಂಶದ ಅಗತ್ಯವಿರುವುದರಿಂದ ಜಾಸ್ತಿ ನೀರು ಕುಡಿದು ಆರೋಗ್ಯವಾಗಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ