ಬೆಂಗಳೂರು: ಮಕ್ಕಳು ಹೆತ್ತವರನ್ನು ನೋಡಿ ಗುಣ ನಡತೆ ಕಲಿಯುತ್ತಾರೆ. ಹಾಗಾಗಿ ಮಕ್ಕಳೆದುರು ನಾವು ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಮಕ್ಕಳೆದುರು ನಾವು ಕೆಲವು ಕೆಲಸಗಳನ್ನು ಮಾಡಲೇಬಾರದು.
ಸುಳ್ಳು ಹೇಳಬೇಡಿ
ಮಕ್ಕಳಿಗೆ ಸುಳ್ಳು ಹೇಳಿ ನಂಬಿಸುವುದು ನಮ್ಮ ಚಾಳಿ. ಆದರೆ ಆದಷ್ಟು ಸುಳ್ಳು ಹೇಳುವುದನ್ನು ತಪ್ಪಿಸಿ. ನೀವೇ ಈ ರೀತಿ ಮಾಡಿದರೆ ಅವರೂ ಸುಳ್ಳು ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ.
ಜಗಳ ಮಾಡಬೇಡಿ
ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಗಾದೆಯೇ ಇದೆಯಲ್ಲಾ? ಮಕ್ಕಳೆದುರು ಜಗಳ ಮಾಡಿದರೆ ಅವರಿಗೆ ಹಿರಿಯರ ಬಗ್ಗೆ ಗೌರವ ಮೂಡದು. ಅವರಿಗೆ ಸುರಕ್ಷಿತ ಭಾವನೆ ಬರದು.
ಹೆಚ್ಚು ಫೋನ್ ಬಳಸಬೇಡಿ
ಇತ್ತೀಚೆಗಿನ ದಿನಗಳಲ್ಲಿ ಮಕ್ಕಳು ಆಡುವುದು ಬಿಟ್ಟು ಫೋನ್ ಬಳಸುತ್ತಾರೆ ಎಂದು ನಾವು ದೂರುತ್ತೇವೆ. ಆದರೆ ನಾವು ಸದಾ ಕಾಲ ಫೋನ್ ನಲ್ಲೇ ಕಳೆದರೆ ಮಕ್ಕಳೂ ಅದನ್ನು ಅನುಕರಿಸುವುದು ಸಹಜ.
ಹಿಂಸಿಸಬೇಡಿ
ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಬಗ್ಗೆ ಏನೇನೋ ಕನಸಿಟ್ಟುಕೊಂಡು ಅದು ನೆರವೇರದಿದ್ದಾಗ ಹೊಡೆದು, ಬಡಿದು ಹಿಂಸಿಸುವುದು ತಪ್ಪು. ಮಕ್ಕಳಿಗೆ ನಿಮ್ಮ ಪ್ರೀತಿ, ಸುಮಧುರ ಮಾತುಗಳ ಬುದ್ಧಿ ಮಾತು ಬೇಕು. ರಾಕ್ಷಸ ಮುಖ ಅವರು ನೋಡಲು ಇಷ್ಟಪಡುವುದಿಲ್ಲ.
ಜಂಕ್ ಫುಡ್
ಮಕ್ಕಳೆದುರು ಪಿಜ್ಜಾ, ಚಿಪ್ಸ್, ಎಂದು ಹಾಳುಮೂಳು ಎಲ್ಲಾ ತಿಂದು ಕೊನೆಗೆ ಆರೋಗ್ಯಕರ ಆಹಾರ ಸೇವಿಸುವುದಿಲ್ಲ ಎಂದು ಕೊರಗಿದರೆ ಪ್ರಯೋಜನವಿಲ್ಲ. ಮೊದಲು ನಾವು ಅವರೆದುರು ಅನಾರೋಗ್ಯಕರ ಆಹಾರ ಸೇವಿಸುವುದನ್ನು ನಿಲ್ಲಿಸಬೇಕು. ಆಗ ಅವರೂ ಅಂತಹದ್ದನ್ನು ಕೇಳಲಾರರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ