ಕೋವಿಡ್-19 ವೈರಸ್ ಹಾವಳಿಯಿಂದಾಗಿ ಸುಮಾರು ಒಂದೂವರೆ ವರ್ಷದಿಂದ ಬಹುತೇಕ ಕಂಪೆನಿಗಳು ತಮ್ಮ ಕಟ್ಟಡಗಳಿಗೆ ಬೀಗ ಹಾಕಿದ್ದು, ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮೊದಲಿಗೆ ಹೆಚ್ಚಿನವರಿಗೆ ಮನೆಯಿಂದ ಕೆಲಸ ಮಾಡುವುದು ತುಂಬಾ ಕಷ್ಟಕರ ಎನಿಸಿದರೂ, ನಿಧಾನವಾಗಿ ಇದಕ್ಕೆ ಹೊಂದಿಕೊಂಡಿದ್ದಾರೆ.
ಮನೆಯಿಂದ ಕೆಲಸ ಮಾಡುತ್ತಿದ್ದರೆ ಹೆಂಡತಿ ಮಕ್ಕಳೊಂದಿಗೆ ಸ್ವಲ್ಪ ಸಮಯ ದೊರೆಯುತ್ತದೆ ಮತ್ತು ಹಾಳಾದ ಟ್ರಾಫಿಕ್ನಲ್ಲಿ ಆಫೀಸಿಗೆ ಹೋಗಿ ಬರುವುದು ತಪ್ಪಿತು ಎಂದು ನಿಟ್ಟುಸಿರು ಬಿಟ್ಟದ್ದುಂಟು. ಆದರೆ ಒಂದು ವರ್ಷ ಕಳೆದ ಬಳಿಕ ಮನೆಯಿಂದ ಕೆಲಸ ಮಾಡುವುದು ಅನೇಕರಿಗೆ ತಲೆನೋವಾಗಿ ಪರಿಣಮಿಸಿದೆ ಎಂದರೆ ಸುಳ್ಳಲ್ಲ.
ಅಂಕಿಅಂಶಗಳ ಪ್ರಕಾರ ನೋಡುವುದಾದರೆ, ಶೇಕಡಾ 40ರಷ್ಟು ಜನರು ಪದೇ ಪದೇ ವಿಡಿಯೋ ಕರೆಗಳಿಂದಾಗಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ, ಮನೆಯಿಂದ ಕೆಲಸ ಮಾಡುವುದು ಅವರ ಕೆಲಸದ ಹೊರೆ ಮತ್ತು ಪ್ರಕ್ರಿಯೆಯಲ್ಲಿಯೂ ಹೆಚ್ಚಾಗಿದ್ದು, ಇದರಿಂದಾಗಿ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.
ಉದಾಹರಣೆಗೆ ನೀವು ನಿಮ್ಮ ಮಕ್ಕಳೊಂದಿಗೆ ಆಟವಾಡುತ್ತಿರುವಿರಿ ಮತ್ತು ಇದ್ದಕ್ಕಿದ್ದಂತೆ ನಿಮ್ಮ ಬಾಸ್ನಿಂದ ಇಮೇಲ್ ಸ್ವೀಕರಿಸುತ್ತೀರಿ. “ಈ ಕೆಲಸ ಬೇಗನೆ ಮುಗಿಸಿ” ಎಂದು ಬರೆದಿರುತ್ತಾರೆ. ಹೀಗೆ ಮನೆಯಿಂದ ಕೆಲಸ ಮಾಡುವುದರಿಂದ ಒಂದು ರೀತಿಯಲ್ಲಿ ಒತ್ತಡ ಜಾಸ್ತಿ ಆಗಿದೆ ಎಂದರೆ ತಪ್ಪಾಗುವುದಿಲ್ಲ.
ಮನೆಯಿಂದ ಕೆಲಸ ಮಾಡುವ ಪದ್ದತಿ ನಿಮ್ಮ ಸಂಬಂಧಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಮತ್ತು ಈ ಸಮಸ್ಯೆಗಳನ್ನು ಹೇಗೆ ಎದುರಿಸಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಸಮತೋಲನ ಕಾಪಾಡಲು ಆಗುತ್ತಿಲ್ಲ:
ನಮ್ಮಲ್ಲಿ ಬಹಳಷ್ಟು ಜನರಿಗೆ ವೈಯಕ್ತಿಕ ಮತ್ತು ಕೆಲಸದ ಜೀವನ ಎರಡರ ಸಮತೋಲನ ನಿಭಾಯಿಸುವುದು ತುಂಬಾ ಕಷ್ಟಕರವಾಗುತ್ತದೆ. ಯಾವ ವಿಷಯಗಳಿಗೆ ಯಾವಾಗ ಗಮನ ನೀಡಬೇಕು ಎಂಬುದನ್ನು ನಾವು ಮರೆತುಬಿಡುತ್ತೇವೆ. ನೀವು ಕೆಲಸಕ್ಕೆ ಹೊರಟಾಗ ಮನೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಹಾಗೆಯೇ ಮನೆಗೆ ಸಂಜೆ ಬಂದರೆ ಕೆಲಸದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನೀವು ಸುಲಭವಾಗಿ ಆರೋಗ್ಯಕರ ಸಮತೋಲನ ಸಾಧಿಸಬಹುದು.
ಒತ್ತಡ ನಿವಾರಿಸುವುದು:
ಕಚೇರಿಯಲ್ಲಿ ಕುಳಿತು ಕೆಲಸ ಮಾಡುವಾಗ, ಕೆಲಸ ಮತ್ತು ವೈವಾಹಿಕ ಹಾಗೂ ಕುಟುಂಬ ಸಂಬಂಧಗಳ ಮೇಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಏಕೆಂದರೆ ಎರಡೂ ಪಾತ್ರಗಳು ಒಂದೇ ಸ್ಥಳದಲ್ಲಿ ಮತ್ತು ಒಂದೇ ಸಮಯದಲ್ಲಿ ನಡೆಯುವುದಿಲ್ಲ. ಆದರೆ ಮನೆಯಿಂದ ಕೆಲಸ ಮಾಡುವಾಗ ಎರಡನ್ನೂ ನಿಭಾಯಿಸುವುದು ಕಷ್ಟವಾಗುತ್ತದೆ.
ಜವಾಬ್ದಾರಿಗಳನ್ನು ಹಂಚಿಕೊಳ್ಳಿ:
ಈಗ ಪ್ರತಿಯೊಬ್ಬರೂ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾರಿಗೂ ಮನೆ ಕೆಲಸಗಳನ್ನು ಮಾಡಲು ಸಾಕಷ್ಟು ಸಮಯವಿಲ್ಲದಿರುವುದರಿಂದ ಅಡುಗೆ ಮತ್ತು ಶುಚಿಗೊಳಿಸುವ ಎಲ್ಲಾ ಹೊರೆ ಒಬ್ಬ ವ್ಯಕ್ತಿಯ ಮೇಲೆ ಬರುತ್ತದೆ. ಇದರಿಂದ ಮಹಿಳೆಯರ ಮೇಲೆ ಜಾಸ್ತಿ ಒತ್ತಡವಾಗುತ್ತದೆ. ಒತ್ತಡ ಜಾಸ್ತಿಯಾದರೆ ಕೋಪಕ್ಕೆ ತಿರುಗಿ ಗಂಡ ಹೆಂಡತಿಯ ಮಧ್ಯೆ ಜಗಳಗಳಾಗುವ ಸಾಧ್ಯತೆ ಹೆಚ್ಚಿರುತ್ತವೆ. ಹಾಗಾಗಿ ಇಬ್ಬರೂ ಮನೆಯ ಕೆಲಸವನ್ನು ಸಮನಾಗಿ ಹಂಚಿಕೊಂಡರೆ ಉತ್ತಮ.
ಒಂದೇ ಮನೆಯಲ್ಲಿ ಕುಳಿತು ಕೆಲಸ ಮಾಡುವುದು ಕಷ್ಟ:
ಗಂಡ ಮತ್ತು ಹೆಂಡತಿ ಇಬ್ಬರೂ ಒಂದೇ ಮನೆಯಲ್ಲಿ ಕುಳಿತು ಏಕಕಾಲಕ್ಕೆ ಕೆಲಸ ಮಾಡುವುದರಿಂದ ಇಂಟರ್ನೆಟ್ ಗುಣಮಟ್ಟದಲ್ಲಿ ಏರುಪೇರಾಗಬಹುದು, ಇಬ್ಬರ ಕಂಪೆನಿ ಕರೆಗಳು ಇನ್ನೊಬ್ಬರಿಗೆ ಅಡಚಣೆ ಆಗಬಹುದು.
ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳುವುದು?
ಜಗಳಗಳ ಕಾರಣ ಅರ್ಥಮಾಡಿಕೊಂಡ ನಂತರ, ತಮ್ಮ ತಮ್ಮ ಜವಾಬ್ದಾರಿಗಳನ್ನು ಒಪ್ಪಿಕೊಳ್ಳುವುದು ಸುಲಭವಾಗುತ್ತದೆ. ಉದಾಹರಣೆಗೆ, ಯಾರು ಯಾವ ಕೆಲಸಗಳನ್ನು ಯಾವಾಗ ನಿರ್ವಹಿಸುತ್ತಾರೆ ಎಂದು ಯೋಜಿಸುವುದು. ನೀವು ಯಾವುದೇ ರೀತಿಯ ತಪ್ಪುಗ್ರಹಿಕೆಯಿಂದ ದೂರವಿರಿ ಮತ್ತು ನಿಮ್ಮ ಕೆಲಸದ ಆದ್ಯತೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಿ ಮತ್ತು ಪರಸ್ಪರ ವಿಶ್ವಾಸ ಬೆಳೆಸಿಕೊಳ್ಳಿ.
ಜೀವನದಲ್ಲಿ ಕೆಲಸ ಮಾಡುವುದು ಮತ್ತು ನಿಮ್ಮ ವೈಯಕ್ತಿಕ ಸಂಬಂಧ ನಿಭಾಯಿಸುವುದು ಎರಡೂ ಮುಖ್ಯವಾಗಿರುತ್ತವೆ ಮತ್ತು ನೀವು ಒಂದನ್ನು ಸಮರ್ಥವಾಗಿ ಮಾಡಲು ಇನ್ನೊಂದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಜವಾಬ್ದಾರಿ ವಹಿಸಿಕೊಳ್ಳಿ ಮತ್ತು ನಿಮ್ಮ ಜಗಳಗಳಿಗೆ ಕೆಲಸ ದೂಷಿಸುವುದು ಅಥವಾ ನಿಮ್ಮ ಕೆಲಸಕ್ಕಾಗಿ ಸಂಬಂಧಗಳನ್ನು ದೂಷಿಸುವುದು ಸರಿಯಲ್ಲ. ಸವಾಲುಗಳ ನಡುವೆಯೂ ನೀವು ಕೆಲಸ ಮಾಡಿದಾಗ ಮಾತ್ರ ನೀವು ಯಶಸ್ವಿಯಾಗಬಹುದು.