ನಮ್ಮ ಪೂರ್ವಜರು ಬುದ್ಧಿಶಾಲಿಗಳು. ಆರೋಗ್ಯಕ್ಕೆ ಅವರ ಕೊಡುಗೆಗಳು, ಸಲಹೆಗಳು ಅಪಾರ. ಹಳಬರ ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಊರೆಲ್ಲಾ ಓಡಾಡಿದರಂತೆ ಎಂಬ ಗಾದೆಮಾತು ಕೆಲವೊಂದು ಬಾರಿ ನಿಜವೆನಿಸುತ್ತದೆ. ಅಂದರೆ ನಮ್ಮ ಮನೆಯ ಅಂಗಳದಲ್ಲಿಯೇ ಇರುವ ಎಷ್ಟೋ ಬೇರುಗಳು, ಗಿಡಗಳು ನಮ್ಮ ಅನಾರೋಗ್ಯಕ್ಕೆ ರಾಮಬಾಣವಾಗಿರುತ್ತವೆ ಎಂದು ನಾವು ಮರೆತಿರುತ್ತೇವೆ.
ಅಂತಹ ಮನೆಯಂಗಳದಲ್ಲಿಯೇ ಸುಲಭವಾಗಿ ಸಿಗುವ ಗಿಡಮೂಲಿಕೆಗಳಲ್ಲಿ ಅಮೃತಬಳ್ಳಿಯೂ ಒಂದು ಎಂದು ಹೇಳಬಹುದು. ಇದನ್ನು ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ. ಈ ಬಳ್ಳಿಯಲ್ಲಿರುವ ಔಷಧೀಯ ಗುಣಗಳಿಂದಲೇ ಇದನ್ನು ಪೂರ್ವಜರು ಅಮೃತಬಳ್ಳಿ ಎಂದು ಕರೆದಿರಬೇಕು. ಹಾಗಾದರೆ ಈ ಬಳ್ಳಿಯಲ್ಲಿರುವ ಆರೋಗ್ಯ ಪ್ರಯೋಜನಗಳನ್ನು ನೋಡೋಣ.
* ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ : ಅಮೃತಬಳ್ಳಿಯ ಕಾಂಡದ ರಸದೊಂದಿಗೆ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ ಮುಂಜಾನೆ ಮತ್ತು ಸಂಜೆ ಸೇವಿಸಿದರೆ ದೇಹದಲ್ಲಿ ರೋಗನಿರೋಧಕ ಅಂಶವು ಹೆಚ್ಚಾಗುತ್ತದೆ. ಇದು ಪುನಶ್ಚೇತನಗೊಳಿಸುವ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತದೆ.
* ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ : ಅಮೃತಬಳ್ಳಿಯ ರಸವನ್ನು ಮಜ್ಜಿಗೆ ಜೊತೆಗೆ ಸೇರಿಸಿ ಕುಡಿಯುವುದರಿಂದ ಅದ್ಭುತ ಪರಿಣಾಮಗಳನ್ನು ಕಾಣಬಹುದು. ಈ ಬಳ್ಳಿಯ ಪುಡಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಸೋಸಿ ಕಷಾಯದ ರೂಪದಲ್ಲಿ ತೆಗೆದುಕೊಳ್ಳುವುದರಿಂದ ಮೂಲವ್ಯಾಧಿಯಿಂದ ಬಳಲುತ್ತಿರುವರು ಉತ್ತಮ ಪರಿಣಾಮಗಳನ್ನು ಕಂಡುಕೊಳ್ಳಬಹುದು.
* ತೀವ್ರವಾದ ಜ್ವರ, ನೆಗಡಿ, ಕೆಮ್ಮುಗಳಿಗೆ ರಾಮಬಾಣವಾಗಿದೆ : ಅಮೃತಬಳ್ಳಿಯ ರಸವು ರಕ್ತದಲ್ಲಿರುವ ಪ್ಲೇಟೇಟ್‌ಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಡೆಂಗ್ಯೂ ಜ್ವರದ ರೋಗಲಕ್ಷಣಗಳನ್ನೂ ಸಹ ನಿವಾರಿಸುತ್ತದೆ. ಇದನ್ನು ಜೇನುತುಪ್ಪದ ಜೊತೆಗೆ ಸೇರಿಸಿ ಸೇವಿಸುವುದರಿಂದ ಮಲೇರಿಯಾದಂತಹ ರೋಗವನ್ನೂ ಸಹ ತಡೆಗಟ್ಟಬಹುದು.
* ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ : ಅಮೃತಬಳ್ಳಿಯ ಕಷಾಯವು ಮಧುಮೇಹವನ್ನು ನಿಯಂತ್ರಿಸುತ್ತದೆ. ಈ ಬಳ್ಳಿಯ ಎಲೆಯನ್ನು ನೀರಿನಲ್ಲಿ ಮೆಂತೆಕಾಳಿನೊಂದಿಗೆ ಕುದಿಸಿ ಅದಕ್ಕೆ ಅರಿಶಿನ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂತ್ರದಲ್ಲಿರುವ ಸಕ್ಕರೆ ಅಂಶವು ಕಡಿಮೆಯಾಗುತ್ತದೆ.
* ಚರ್ಮರೋಗವನ್ನು ನಿವಾರಿಸುವಲ್ಲಿ ಹೆಚ್ಚು ಪರಿಣಾಮಕಾರಿ : ಅಮೃತಬಳ್ಳಿಯ ಎಲೆ. ಕಾಂಡಗಳನ್ನು ಜಜ್ಜಿ ಪೇಸ್ಟಿನಂತೆ ಮಾಡಿಕೊಂಡು ನಿಂಬೆ ಹಣ್ಣಿನ ರಸವನ್ನು ಚರ್ಮಕ್ಕೆ ಲೇಪನ ಮಾಡುವುದರಿಂದ ಚರ್ಮರೋಗವು ನಿವಾರಣೆಯಾಗುತ್ತದೆ. ಇದು ಚರ್ಮವನ್ನು ಸುಂದರವಾಗಿರಿಸುವುದರೊಂದಿಗೆ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
* ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ : ಅಮೃತಬಳ್ಳಿಯ ರಸವು ಮೆಮೊರಿಯನ್ನು ಹೆಚ್ಚಿಸುವುದರೊಂದಿಗೆ ಮಾನಸಿಕ ಒತ್ತಡವನ್ನೂ ಸಹ ಕಡಿಮೆ ಮಾಡುತ್ತದೆ. ಅದಲ್ಲದೇ ಈ ಬಳ್ಳಿಯ ರಸವನ್ನು 2 ಚಮಚ ತೆಗೆದುಕೊಂಡು ಒಂದೆಲಗದ ರಸದೊಂದಿಗೆ ಮಿಶ್ರಣ ಮಾಡಿ ದಿನಕ್ಕೆ 3 ಬಾರಿ ಸೇವಿಸುವುದರಿಂದ ಬುದ್ಧಿಭ್ರಮಣೆಯು ಹತೋಟಿಗೆ ಬರುತ್ತದೆ.
* ಕಣ್ಣಿನ ಆರೋಗ್ಯಕ್ಕೆ ಬಹು ಉಪಯೋಗಕಾರಿ : ಅಮೃತಬಳ್ಳಿಯನ್ನು ಕಣ್ಣಿನ ಅಸ್ವಸ್ಥತೆಯ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಈ ಬಳ್ಳಿಯು ಸ್ಪಷ್ಟತೆಯನ್ನು ಹೆಚ್ಚಿಸುವುದಲ್ಲದೇ ಕನ್ನಡಕವಿಲ್ಲದೆಯೇ ಉತ್ತಮವಾಗಿ ಕಾಣುವಂತೆ ಮಾಡುತ್ತದೆ. ಹಾಗೂ ಮುಖದ ಮೇಲಿರುವ ಗಾಢ ಕಲೆಗಳು, ಗುಳ್ಳೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ.
ಅಮೃತಬಳ್ಳಿಯು ವೈದ್ಯಕೀಯ ಶಾಸ್ತ್ರದಲ್ಲಿ ಅಗ್ರಗಣ್ಯವಾದ ಗಿಡಮೂಲಿಕೆಯಲ್ಲಿ ಒಂದಾಗಿದೆ. ಇದು ಸಾಮಾನ್ಯವಾಗಿ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇಂತಹ ಗಿಡಮೂಲಿಕೆಗಳನ್ನು ನಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಬಳಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಆದರೆ ಇವತ್ತಿನ ಕಲುಷಿತಭರಿತ ಆಹಾರ ಪದಾರ್ಥಗಳಿಂದ ಸೇವಿಸುವ ಆಹಾರವು ವಿಷವಾಗಿ ಪರಿಣಮಿಸಿದೆ. ಕೆಲವೊಮ್ಮೆ ಎಷ್ಟೇ ಕಾಳಜಿಯಿಂದ ಇದ್ದರೂ ಅನಾರೋಗ್ಯಕ್ಕೆ ತುತ್ತಾಗುವುದು ಸಹಜ. ಆಗ ವೈದ್ಯರ ಸಲಹೆಯನ್ನು ಪಡೆಯುವುದೂ ಅವಶ್ಯಕವಾಗಿರುತ್ತದೆ. ಒಬ್ಬೊಬ್ಬರ ದೇಹ ಪ್ರಕೃತಿಯು ಒಂದೊಂದು ರೀತಿಯದಾಗಿರುವುದರಿಂದ ಆರೋಗ್ಯದ ದೃಷ್ಟಿಯಿಂದ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.