ನವದೆಹಲಿ: ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಬೇಷರತ್ ಕ್ಷಮಾಪಣೆ ಯಾಚಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಒಂದು ವೇಳೆ ಬೇಷರತ್ ಕ್ಷಮಾಪಣೆ ಕೇಳದೇ ಇದ್ದರೆ ನಿಂದನೆ ಪ್ರಕರಣದ ಕುರಿತ ವಿಚಾರಣೆಯನ್ನು ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಲೋಧಾ ಸಮಿತಿ ಶಿಫಾರಸುಗಳನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿ ವಿಳಂಬ ಧೋರಣೆ ತೋರಿದ ಪ್ರಕರಣಕ್ಕೆ ಅಂತ್ಯ ಹಾಡಬೇಕಾದರೆ ಇದೇ ಜುಲೈ 14ರಂದು ಸ್ವತಃ ಸುಪ್ರೀಂಕೋರ್ಟ್ ಗೆ ಹಾಜರಾಗಿ ಖುದ್ದು ಕ್ಷಮೆಯಾಚಿಸುವಂತೆ ಸೂಚಿಸಿದೆ. ಅಲ್ಲದೇ ಕ್ಷಮಾಪಣೆ ಅಫಿಡೆವಿಟ್ ಸಲ್ಲಿಸುವಂತೆಯೂ ತಿಳಿಸಿದೆ. ಒಂದು ವೇಳೆ ಠಾಕೂರ್ ಕ್ಷಮಾಪಣೆ ಕೇಳಿದರೆ ಅವರನ್ನು ಮನ್ನಿಸಿ ಅವರ ಮೇಲೆ ಹಾಕಲಾಗಿರುವ ನಿಂದನೆ ಪ್ರಕರಣವನ್ನು ರದ್ದುಪಡಿಸಲಾಗುವುದು ಎಂದೂ ಸುಪ್ರೀಂ ಪೀಠ ತಿಳಿಸಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅನುರಾಗ್ ಠಾಕೂರ್ ಇದು ನನ್ನು ವೈಯಕ್ತಿಕ ಸಂಘರ್ಷವಲ್ಲ. ಇದು ಕ್ರೀಡಾ ಇಲಾಖೆಯ ಸ್ವಾಯತ್ತತೆಯ ಸಂಘರ್ಷವಾಗಿತ್ತು. ನನಗೆ ಸುಪ್ರೀಂ ಕೋರ್ಟ್ ಬಗ್ಗೆ ಅಪಾರ ಗೌರವವಿದೆ ಎಂದು ತಿಳಿಸಿದ್ದಾರೆ.